ಮಂಗಳೂರು: ಕರುನಾಡ ಕರಾವಳಿಯ ದೇವಾಲಯಗಳು ಒಂದಿಲ್ಲೊಂದು ಪವಾಡದಿಂದ ಗಮನಸೆಳೆಯುತ್ತ ಇರುತ್ತದೆ. ಗಡಿಜಿಲ್ಲೆ ಕಾಸರಗೋಡು ಸಮೀಪದ ಅನಂತಪುರದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕೆಲ ಸಮಯದ ಹಿಂದಷ್ಟೇ ದೇವರ ಮೊಸಳೆ ‘ಬಬಿಯಾ’ ಸಾವನ್ನಪ್ಪಿತ್ತು. ದೇವಾಲಯದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ‘ಬಬಿಯಾ’ ಸಾವಿನ ನಂತರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಲ್ಲಿ ಬೇಸರ ಕಂಡುಬರುತ್ತಿತ್ತು.
ಇದೀಗ ಅನಂತಪುರದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ಈ ಹೊಸ ಮೊಸಳೆ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಸುಮಾರು ಒಂದು ವಾರದ ಹಿಂದೆ ದೇಗುಲಕ್ಕೆ ಭೇಟಿ ನೀಡಿದ್ದ ಭಕ್ತರೊಬ್ಬರು ಕಲ್ಯಾಣಿಯಲ್ಲಿ ‘ಮೊಸಳೆ ಕಂಡಂತೆ ಆಯಿತು’ ಎಂದು ಹೇಳಿಕೊಂಡಿದ್ದರು. ಆದರೆ ಯಾರೂ ಇದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಮೊಸಳೆ ಇರುವುದನ್ನು ದೇಗುಲದ ಆಡಳಿತ ಮಂಡಳಿಯೇ ಖಚಿತಪಡಿಸಿದೆ.
ದೇವರ ಪ್ರತಿಬಿಂಬ ಎಂದೇ ಹೇಳಲ್ಪಡುತ್ತಿರುವ ಮೊಸಳೆ ಈಗ ಕಾಣಿಸಿರುವುದು ಭಕ್ತಾದಿಗಳಲ್ಲಿ ಖುಷಿ ತಂದಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ಮಾಜಿ ಸಚಿವ ಸಿ.ಟಿ.ರವಿ, ‘ಸರೋವರ ಕ್ಷೇತ್ರ ಕುಂಬಳೆ ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಮತ್ತೆ ಹೊಸ ಮೊಸಳೆ ಪ್ರತ್ಯಕ್ಷ ಆಗಿದೆ. ಪದ್ಮನಾಭ ಕ್ಷೇತ್ರದ ಕೊಳದಲ್ಲಿ ವಾಸವಾಗಿದ್ದ ದೈವಸ್ವರೂಪಿ ಮೊಸಳೆ ‘ಬಬಿಯಾ’ ಹರಿಪಾದ ಸೇರಿದ ಬಳಿಕ ಸುಮಾರು ಒಂದು ವರ್ಷದ ನಂತರ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ’ ಎಂದಿದ್ದಾರೆ.
ಸರೋವರ ಕ್ಷೇತ್ರ ಕುಂಬಳೆ ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಮತ್ತೆ ಹೊಸ ಮೊಸಳೆ ಪ್ರತ್ಯಕ್ಷ ಆಗಿದೆ. ಪದ್ಮನಾಭ ಕ್ಷೇತ್ರದ ಕೊಳದಲ್ಲಿ ವಾಸವಾಗಿದ್ದ ದೈವಸ್ವರೂಪಿ ಮೊಸಳೆ ಬಬಿಯಾ ಹರಿಯ ಪಾದ ಸೇರಿದ ಬಳಿಕ ಸುಮಾರು ಒಂದು ವರ್ಷದ ನಂತರ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. pic.twitter.com/TKzbrqUoQU
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) November 11, 2023
ಏನಿದು ಮೊಸಳೆ ಪವಾಡ?
‘ಸರೋವರ ಕ್ಷೇತ್ರ’ ಕುಂಬಳೆ ಅನಂತ ಪದ್ಮನಾಭನ ಸನ್ನಿಧಿಯಲ್ಲಿನ ಮೊಸಳೆ ಇತಿಹಾಸ ಪುಟದಲ್ಲೂ ಕುತೂಹಲದ ಅಧ್ಯಾಯ. ಈ ದೇವಸ್ಥಾನದ ಸರೋವರದಲ್ಲಿ ಅನಾದಿ ಕಾಲದಿಂದಲೂ ಮೊಸಳೆ ಇತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿನ ‘ದೇವರ ಮೊಸಳೆ’ ಬ್ರಿಟೀಷರ ಗುಂಡೇಟಿಗೆ ಬಲಿಯಾಗಿತ್ತು. ಸ್ವಲ್ಪ ಸಮಯದಲ್ಲೇ ಮತ್ತೊಂದು ಮೊಸಳೆ ಪ್ರತ್ಯಕ್ಷಗೊಂಡಿತ್ತು. ಆ ಮೊಸಳೆ ‘ಬಬಿಯಾ’ ಹೆಸರಿನಲ್ಲೇ ಪ್ರಸಿದ್ಧಿಯಾಗಿತ್ತು. ದೇವಸ್ಥಾನದ ಕಲ್ಯಾಣಿಯಲ್ಲಿ ಉಳಿಯುತ್ತಿದ್ದ ಸಸ್ಯಹಾರಿ ‘ಬಬಿಯಾ’ ಮೊಸಳೆಗೆ ಪ್ರತಿನಿತ್ಯ ಪೂಜೆಯ ಬಳಿಕ ನೈವೇದ್ಯ ಅರ್ಪಿಸಲಾಗುತ್ತಿತ್ತು. ಈ ನೈವೇದ್ಯವೇ ಮೊಸಳೆಯ ಆಹಾರವಾಗಿತ್ತು. ಈ ಮೊಸಳೆಯು ಯಾರಿಗೂ ತೊಂದರೆ, ನೋವು ಉಂಟು ಮಾಡಿಲ್ಲ.
ಸುಮಾರು 75 ವರ್ಷಗಳ ಕಾಲ ಪೂಜಿಸಲ್ಪಡುತ್ತಿದ್ದ ದೇವರ ಮೊಸಳೆ ‘ಬಬಿಯಾ’ 2022ರ ಅಕ್ಟೋಬರ್ 9 ರಂದು ಮೃತಪಟ್ಟಿತ್ತು. ಇದೀಗ ಬಬಿಯಾ ಮೃತಪಟ್ಟ ಒಂದು ವರ್ಷ ಬಳಿಕ ಮತ್ತೊಂದು ಮೊಸಳೆ ಪ್ರತ್ಯಕ್ಷಗೊಂಡಿದೆ. ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿರುವ ಈ ಮೊಸಳೆ ಅನಂತ ಪದ್ಮನಾಭನ ಭಕ್ತರ ಕುತೂಹಲದ ಕೇಂದ್ರಬಿಂದುವಾಗಿದೆ.