ಬೆಂಗಳೂರು: ಬಡಪಾಯಿ ಬಿಎಂಟಿಸಿ ನೌಕರರ ಪುತ್ರಿ ಶೈಕ್ಷಣಿಕ ಸಾಧನೆ ಮೂಲಕ ನಾಡಿನ ಗಮನಸೆಳೆದಿದ್ದಾಳೆ. ಕುವೆಂಪು ವಿಶ್ವವಿದ್ಯಾಲಯದ ಎಂ.ಎಸ್.ಸಿ. ಪರಿಸರ ವಿಜ್ಞಾನ ವಿಭಾಗದಲ್ಲಿ ಬರೋಬ್ಬರಿ 5 ಚಿನ್ನದ ಪದಕಗಳನ್ನು ಪಡೆದಿರುವ ವಿದ್ಯಾರ್ಥಿನಿ ರೋಹಿಣಿ ಇದೀಗ ರಾಜ್ಯದ ಸಾರಿಗೆ ನಿಗಮಗಳ ಗುಂಪಿನಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದಾಳೆ. ಈಕೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ-3ರ ಚಾಲಕ ಉಮೇಶ್ ಎಂಬವರ ಪುತ್ರಿ ರೋಹಿಣಿ, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಎಂ.ಎಸ್.ಸಿ. ಪರಿಸರ ವಿಜ್ಞಾನ ವಿಭಾಗದಲ್ಲಿ 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಈ ವಿಚಾರವು ಶೈಕ್ಷಣಿಕ ವಲಯದಲ್ಲಿ ಸಂತಸದ ಸುದ್ದಿಯೆನಿಸಿದರೂ ಕೆಎಸ್ಸಾರ್ಟಿಸಿ-ಬಿಎಂಟಿಸಿ ನಿಗಮದ ಪಾಲಿಗೂ ಹೆಮ್ಮೆಯ ವಿಷಯವೆನಿಸಿದೆ. ತಮ್ಮ ಸಹೋದ್ಯೋಗಿಯ ಮಗಳ ಸಾಧನೆಯನ್ನು ಸಾರಿಗೆ ನಿಗಮಗಳ ನೌಕರರು ಹೆಮ್ಮೆಯಿಂದ ಕೊಂಡಾಡುತ್ತಿದ್ದಾರೆ. ಈ ವಿಷಯ ತಿಳಿದ ಅಧಿಕಾರಿಗಳೂ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.
ಈ’ನಡುವೆ, ಶೈಕ್ಷಣಿಕ ಕ್ಷೇತ್ರದ ಚಿನ್ನದ ಹುಡುಗಿ ರೋಹಿಣಿಯನ್ನು ಬಿಎಂಟಿಸಿ ಕಚೇರಿಗೆ ಕರೆಸಿಕೊಂಡ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅಭಿನಂಧಿಸಿದ್ದಾರೆ. ರೋಹಿಣಿಯ ತಂದೆ-ತಾಯಿಯ ಉಪಸ್ಥಿತಿಯಲ್ಲಿ ಬಿಎಂಟಿಸಿ ಎಂಡಿ ಸತ್ಯವತಿ ಅವರು ನಗದು ಪುರಸ್ಕಾರ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.
ತಮ್ಮ ನಿಗಮದ ನೌಕರರ ಕುಟುಂಬ ವರ್ಗದವರ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ರೂ.5000 ನಗದು ಹಾಗೂ ಪ್ರಶಂಸನಾ ಪತ್ರವನ್ನು ,ನಿಗಮದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನೀಡಿ ಅಭಿನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






















































