ಬೆಂಗಳೂರು; ರಾಜ್ಯದಲ್ಲೀಗ ಚುನಾವಣಾ ಪರ್ವಕಾಲ. ಅಖಾಡ ಇದೀಗ ರಾಜಕೀಯ ಪಕ್ಷಗಳ ಮೇಲಾಟಕ್ಕೆ ಸಾಕ್ಷಿಯಾಗುತ್ತಿರುವಂತೆಯೇ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡುಹೊಡೆದಿರುವ ಆಮ್ ಆದ್ಮಿ ಪಾರ್ಟಿ ‘ಗ್ಯಾರೆಂಟಿಗಳ ಪಟ್ಟಿ ಬಿಡುಗಡೆ’ ಮಾಡಿ ಕುತೂಹಲದ ಕೇಂದ್ರ ಬಿಂದುವಾಗಿದೆ.
ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ಗ್ಯಾರೆಂಟಿಗಳ ಪಟ್ಟಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ಸಿಂಗ್, ‘ಆಮ್ ಆದ್ಮಿ’ ಸುಳ್ಳು ಆಶ್ವಾಸನೆಗಳನ್ನು ನೀಡುವ ಪಕ್ಷವಲ್ಲ. ನಾವು ಆಶ್ವಾಸನೆಗಳ ಬದಲು ಗ್ಯಾರೆಂಟಿ ಕಾರ್ಡ್ ನೀಡುತ್ತೇವೆ ಎಂದರು. ದೆಹಲಿ ಚುನಾವಣೆಯಲ್ಲೂ ಇದೇ ರೀತಿ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿತ್ತು. ಅದನ್ನು ನೆನಪಿಸಿದ ಸಂಜಯ್ ಸಿಂಗ್, ಇದೊಂದು ಕರಾರುಪತ್ರವಾಗಿದ್ದು, ಇವೆಲ್ಲವನ್ನೂ ಶೇ.100ರಷ್ಟು ಈಡೇರಿಸುತ್ತೇವೆ ಎಂದರು
ಸಂಜಯ್ ಸಿಂಗ್ ನೀಡಿದ ‘ಗ್ಯಾರಂಟಿ ಪಟ್ಟಿ’ಯ ಹೈಲೈಟ್:
-
ಪ್ರಣಾಳಿಕೆಯಲ್ಲಿದ್ದ ಎಲ್ಲ ಗ್ಯಾರೆಂಟಿಗಳನ್ನು ‘ಆಪ್’ ದೆಹಲಿಯಲ್ಲಿ ಈಡೇರಿಸಿದೆ.
-
ಪಂಜಾಬ್‌ನಲ್ಲಿ ಕೂಡ ಒಂದೊಂದಾಗಿ ಜಾರಿಗೆ ಬರುತ್ತಿದೆ.
-
ಕರ್ನಾಟಕದಲ್ಲಿ ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಕಲ್ಪಿಸಲಾಗುವುದು.
ನಿರುದ್ಯೋಗಿ ಯುವಜನತೆಗೆ ತಿಂಗಳಿಗೆ 3000 ರೂಪಾಯಿ ನಿರುದ್ಯೋಗ ಭತ್ಯೆ ನೀಡಲಾಗುತ್ತೆ.
-
ಗುಣಮಟ್ಟದ ಆರೋಗ್ಯ ಸೇವೆಗಾಗಿ ಕ್ಲಿನಿಕ್‌ಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲಾಗುವುದು..
-
ಹಳೆ ಪಿಂಚಣಿ ಯೋಜನೆ ಜಾರಿ ಸಹಿತ ಒಟ್ಟು 10 ವಲಯಗಳಿಗೆ ಸಂಬಂಧಿಸಿದ ಗ್ಯಾರೆಂಟಿಗಳನ್ನು ಘೋಷಿಸಲಾಗುತ್ತಿದೆ.
-
ಜೊತೆಗೆ, ಬೆಂಗಳೂರು ಹಾಗೂ ರಾಜ್ಯದ ಪ್ರಾದೇಶಿಕ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಗ್ಯಾರೆಂಟಿಗಳನ್ನು ಘೋಷಿಸುತ್ತಿದೆ.
“ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಮೂರನೇ ಬಾರಿ ಹಾಗೂ ಪಂಜಾಬ್‌ನಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದೆ. ಗೋವಾ ಚುನಾವಣೆಯಲ್ಲಿ ಶೇ. 6ಕ್ಕಿಂತಲೂ ಹೆಚ್ಚು ಮತ ಪಡೆದಿದ್ದೇವೆ. ಗುಜರಾತ್‌ನಲ್ಲಿ ಶೇ. 14ರಷ್ಟು ಮತ ಪಡೆದಿದ್ದು, ಐವರು ಶಾಸಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಾರ್ಟಿಯು ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಕಾನೂನಿನ ಪ್ರಕಾರ ಅರ್ಹವಾಗಿದ್ದರೂ ಚುನಾವಣಾ ಆಯೋಗವು ಇನ್ನೂ ಇದನ್ನು ಅಧಿಕೃತವಾಗಿ ಘೋಷಿಸಿಲ್ಲ. ಸ್ಥಾನಮಾನ ಕೋರಿ ನಾವು ಸಲ್ಲಿಸಿದ್ದ ಅರ್ಜಿಯನ್ನು ಹಲವು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ” ಎಂದು ಸಂಜಯ್ ಸಿಂಗ್ ಬೇಸರ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ಕಳೆದ ಒಂದು ತಿಂಗಳಿನಿಂದ ಪ್ರಣಾಳಿಕೆ ರಚಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ರಾಜ್ಯದ ಮೂಲೆಮೂಲೆಗಳಿಂದ ಈಗಾಗಲೇ ಸಾವಿರಾರು ಸಲಹೆಗಳು ಬಂದಿವೆ. ಬೇರೆಬೇರೆ ವರ್ಗಗಳ ಜನಸಮಾನ್ಯರು, ಯುವಜನತೆ, ಮಹಿಳೆಯರು, ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. ಜನರಿಂದ ಜನರಿಗಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಯಾವ್ಯಾವುದನ್ನು ನಮ್ಮಿಂದ ಮಾಡಲು ಸಾಧ್ಯವೋ ಅವುಗಳನ್ನು ಸೇರಿಸುತ್ತಿದ್ದೇವೆ. ಆಮ್ ಆದ್ಮಿ ಪಾರ್ಟಿಯ ಗ್ಯಾರೆಂಟಿಗಳಿಂದಾಗಿ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ 8ರಿಂದ 10 ಸಾವಿರ ರೂಪಾಯಿ ಉಳಿತಾಯವಾಗಲಿದೆ. ನಾವು ಇವುಗಳನ್ನು ಗ್ಯಾರೆಂಟಿ ಕಾರ್ಡ್ ರೂಪದಲ್ಲಿ ನೀಡುತ್ತಿದ್ದು, ಅಧಿಕಾರಕ್ಕೆ ಬಂದು ನಾವು ಇವುಗಳನ್ನು ಜಾರಿಗೆ ತರದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಜನರಿಗೆ ಅವಕಾಶವಿರುತ್ತದೆ. ರಾಜ್ಯದ ಪ್ರತಿಯೊಂದು ವರ್ಗದ ಜನರ ಸಮಸ್ಯೆಗಳಿಗೆ ಪ್ರಣಾಳಿಕೆಯಲ್ಲಿ ಪರಿಹಾರ ಇರಲಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್, ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಮೊದಲಾದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



















































ಸಂಜಯ್ ಸಿಂಗ್ ನೀಡಿದ ‘ಗ್ಯಾರಂಟಿ ಪಟ್ಟಿ’ಯ ಹೈಲೈಟ್: 