ಚಿಕ್ಕಮಗಳೂರು: ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ನಾಯಕರನ್ನೇ ಸೋಲಿಸಿ ಅನ್ಯಾಯ ಮಾಡಿದವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿ ಪಕ್ಷ ಹಾಗೂ ಬಿಜೆಪಿ ನಾಯಕರ ಬಗ್ಗೆ ಸಿದ್ದರಾಮಯ್ಯ ಮಾಡುತ್ತಿರುವ ಟ್ವೀಟ್ ಕುರಿತಂತೆ ಸಿ.ಟಿ.ರವಿ ತಮ್ಮದೇ ವ್ಯಂಗ್ಯದ ಶೈಲಿಯಲ್ಲಿ ಪ್ರತಿಕ್ರಿಯಿಸಿದರು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರ ನ್ಯಾಯದ ಮಾತಿನ ಬಗ್ಗೆ ಟೀಕಿಸಿದರು. ತಮ್ಮನ್ನು ಸೋಲಿಸಿದವರನ್ನು ಸೋಲಿಸಿ ನ್ಯಾಯ ಕೊಡಿ ಎಂದು ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕೇಳಬೇಕೇ ಹೊರತು ಸಿದ್ದರಾಮಯ್ಯ ಅಲ್ಲ ಎಂದರು.
ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವವರು ಮೋದಿ ಅಲ್ಲ ಎಂದು ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸ ಬಗ್ಗೆ ಕುಟುಕಿದ ಸಿ.ಟಿ.ರವಿ, ಸಮಾಜವಾದಿ ಹೆಸರಿನಲ್ಲಿ ಮಜಾವಾದಿ ರಾಜಕಾರಣ ಮಾಡಿದ್ದಕ್ಕೆ ರಾಜ್ಯದ ಜನ ನ್ಯಾಯ ದೊರಕಿಸುವ ಉದ್ದೇಶದಿಂದಲೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ವಿಶ್ಲೇಷಿಸಿದರು. ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರ ಮೇಲಿನ ಕೇಸ್‌ಗಳನ್ನು ಹಿಂಪಡೆದು ಸರಣಿ ಕೊಲೆಗೆ ಕಾರಣವಾಗಿದ್ದು ಸಿದ್ದರಾಮಯ್ಯ ಎಂದೂ ರವಿ ಗುಡುಗಿದರು.



















































