ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಶಕ್ತಿಪ್ರದರ್ಶನ ಮಾಡಿದೆ. ಬಾಗಲಕೋಟೆಯಲ್ಲಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಜನಸಾಗರ ಕಂಡು ‘ಕೈ’ ನಾಯಕರು ಪುಳಕಿತರಾದರು.
ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 2018ರಲ್ಲಿ ನಮ್ಮ ಸರ್ಕಾರದ ಕಡೇ ಬಜೆಟ್ ಅನ್ನು ಮಂಡಿಸಿದ್ದೆ, ಅದರಲ್ಲಿ ನಾವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ್ದ ಭರವಸೆಗಳು ಹಾಗೂ ಅಧಿಕಾರಕ್ಕೆ ಬಂದ ನಂತರ ಈಡೇರಿಸಿದ ಭರವಸೆಗಳು ಯಾವುವು ಹಾಗೂ ಮುಂದೆ ಏನು ಮಾಡುತ್ತೇವೆ ಎಂಬುದನ್ನು ಹೇಳಿದ್ದೆ. 2013ರ ಚುನಾವಣೆಯಲ್ಲಿ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿದ್ದೆ, ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಆದರೆ ರಾಜ್ಯ ಬಿಜೆಪಿ ಅವರು 2018ರಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿದ್ದರು. ಇದರಲ್ಲಿ 50 ರಿಂದ 60 ಭರವಸೆಗಳನ್ನು ಕೂಡ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ. ಈಗ ಮತ್ತೆ ಚುನಾವಣೆ ಹತ್ತಿರ ಬಂದಿರುವುದರಿಂದ ಬೊಮ್ಮಾಯಿ ಅವರು ಫೆಬ್ರವರಿ 17ಕ್ಕೆ ಬಜೆಟ್ ಮಂಡಿಸುವ ಘೋಷಣೆ ಮಾಡಿದ್ದಾರೆ, ಇದರಲ್ಲಿ ಏನೆಲ್ಲ ಘೋಷಣೆ ಮಾಡಲು ಸಾಧ್ಯ ಅವೆಲ್ಲವನ್ನು ಘೋಷಿಸಿ, ಒಂದನ್ನೂ ಈಡೇರಿಸಲ್ಲ. ಇಂಥಾ ಭರವಸೆಗಳನ್ನು ನೀವು ನಂಬಬೇಡಿ ಎಂದರು.
ಬಿಜೆಪಿ ಅವರು 2018ರಲ್ಲಿ ಮಹಿಳೆಯರಿಗೆ 21 ಭರವಸೆಗಳನ್ನು ನೀಡಿ, ಅವರನ್ನು ಉದ್ಧಾರ ಮಾಡುವುದಾಗಿ ಹೇಳಿದ್ದರು, ಈಗ ಬಿಜೆಪಿ ಆಡಳಿತದ ಮೂರುವರೆ ವರ್ಷಗಳಲ್ಲಿ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಈ ವಿಚಾರವನ್ನು ಅವರು ತಮ್ಮ ಪ್ರಣಾಳಿಕೆಯೊಂದಿಗೆ ಬರಲಿ, ನಾನು ನಮ್ಮ ಪ್ರಣಾಳಿಕೆಯೊಂದಿಗೆ ಬರುತ್ತೇನೆ, ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಬೇರೆಯವರಿಗೆ ಧಮ್, ತಾಕತ್ ಪ್ರಶ್ನೆ ಮಾಡುವ ಬೊಮ್ಮಾಯಿ ಅವರು ಒಂದೇ ವೇದಿಕೆ ಮೇಲೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು
ಮೊನ್ನೆ 16ರಂದು ಕಾಂಗ್ರೆಸ್ ಪಕ್ಷ “ನಾ ನಾಯಕಿ” ಸಮಾವೇಶವನ್ನು ಏರ್ಪಾಡು ಮಾಡಿತ್ತು, ಇದಕ್ಕೆ ಪ್ರಿಯಾಂಕ ಗಾಂಧಿ ಅವರು ಆಗಮಿಸಿದ್ದರು. ನಾವು ಪ್ರತೀ ಕುಟುಂಬದ ಯಜಮಾನಿಗೆ 2000 ರೂ. ನೀಡುತ್ತೇವೆ ಎಂಬ ಭರವಸೆ ನೀಡಿದ ಮೇಲೆ ಬಿಜೆಪಿಯವರು ಜಾಹೀರಾತು ನೀಡಿ, ಮಹಿಳೆಯರಿಗೆ ಅದನ್ನು ಮಾಡುತ್ತೇವೆ, ಇದನ್ನು ಮಾಡುತ್ತೇವೆ ಎಂದು ಪುಂಕಾನುಪುಂಕವಾಗಿ ಸುಳ್ಳು ಆಶ್ವಾಸನೆ ನೀಡಿದ್ದಾರೆ. ಅಧಿಕಾರಕ್ಕೆ ಬಂದು ಮೂರುವರೆ ವರ್ಷವಾಯಿತಲ್ಲ ಬೊಮ್ಮಾಯಿ ಅವರು ಯಾಕೆ ಇಷ್ಟು ದಿನ ಮಹಿಳೆಯರಿಗಾಗಿ ಒಂದು ಯೋಜನೆಯನ್ನು ಜಾರಿ ಮಾಡಿಲ್ಲ? ನಿಮ್ಮ ಕೈಹಿಡಿದುಕೊಂಡವರು ಯಾರು ಬೊಮ್ಮಾಯಿ? ಎಂದರು.
ನಾವು ಕೊಟ್ಟ ಮಾತಿನಂತೆ ನಡೆದುಕೊಂಡರೆ, ಬಿಜೆಪಿ ವಚನ ಭ್ರಷ್ಟರು. ರಾಜ್ಯದ ಪ್ರತೀ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುವ ಭರವಸೆಗೆ ನಾನು, ಡಿ.ಕೆ ಶಿವಕುಮಾರ್ ಸಹಿ ಮಾಡಿದ್ದೇವೆ. ಇದನ್ನು ಅಕ್ಷರಶಃ ಜಾರಿಗೆ ತಂದೇ ತರುತ್ತೇವೆ. ಪ್ರತೀ ಮನೆಗೆ ಬಂದು ಮನೆಯ ಯಜಮಾನಿಯನ್ನು ಗುರುತಿಸಿ ಅವರಿಗೆ 2000 ರೂ. ತಿಂಗಳಿಗೆ ನೀಡುವ ಕೆಲಸ ಮಾಡುತ್ತೇವೆ. ಈ ಹಿಂದೆ ಗರ್ಭೀಣಿ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಅಡಿ ಪೌಷ್ಟಿಕಾಂಶಯುಕ್ತ ಬಿಸಿಯೂಟ ನೀಡುತ್ತೇವೆ ಎಂದು ಹೇಳಿ, ಅದನ್ನು ಜಾರಿ ಮಾಡಿದ್ದೆವು. ಈಗ ಅದು ಬಂದ್ ಆಗಿದೆ ಎಂದ ಸಿದ್ದರಾಮಯ್ಯ, ರಾಜ್ಯದ ಎಲ್ಲಾ ಮನೆಗಳಿಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ತೇವೆ. ಇದೇ ಬಿಜೆಪಿ ಪಕ್ಷ ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಕೆಲಸವನ್ನು ಪೂರ್ಣಗೊಳಿಸುತ್ತೇವೆ ಮತ್ತು 5 ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಯನ್ನು ನೀರಾವರಿಗೆ ಖರ್ಚು ಮಾಡುವುದಾಗಿ ಹೇಳಿತ್ತು. ಕಳೆದ ಮೂರುವರೆ ವರ್ಷಗಳಲ್ಲಿ 45,000 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದಾರೆ. ಇದೇ ಕಾರಣಕ್ಕೆ ನಾವು ಬಿಜಾಪುರದಲ್ಲಿ ಸಮಾವೇಶ ಮಾಡಿ, ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 2 ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಬಿಜಾಪುರದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ, ಪುನರ್ವಸತಿ ಕಲ್ಪಿಸಿ ಕೊಟ್ಟಿಲ್ಲ. ನಾವು ಅಧಿಕಾರಕ್ಕೆ ಬಂದರೆ ಎಲ್ಲ ಸಂತ್ರಸ್ತರಿಗೆ ಪರಿಹಾರ ನೀಡಿ, ಪುನರ್ವಸತಿ ಕಾರ್ಯ ಮಾಡುತ್ತೇವೆ. ತುಂಗಭದ್ರಾ ಅಣೆಕಟ್ಟಿನಲ್ಲಿ 37 ಟಿಎಂಸಿ ನೀರು ಶೇಖರಣೆಯಾಗುವಷ್ಟು ಹೂಳು ತುಂಬಿದೆ, ನಮ್ಮ ಪಾಲಿನ 200 ಟಿಎಂಸಿ ನೀರು ಆಂದ್ರಪ್ರದೇಶಕ್ಕೆ ಹೋಗುತ್ತಿದೆ. ಇದನ್ನು ಸರಿಪಡಿಸಲು ತುಂಗಭದ್ರಾ ಅಣೆಕಟ್ಟಿಗೆ ಸಮನಾಂತರವಾಗಿ ಇನ್ನೊಂದು ಅಣೆಕಟ್ಟು ನಿರ್ಮಾಣ ಮಾಡುತ್ತೇವೆ. ಹೀಗೆ ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಮೇಕೆದಾಟು ಎಲ್ಲಾ ನೀರಾವರಿಗೆ ಯೋಜನೆಗಳನ್ನು 2 ಲಕ್ಷ ಕೋಟಿ ಹಣದಲ್ಲಿ ಪೂರ್ಣಗೊಳಿಸುತ್ತೇವೆ. 2012ರಲ್ಲಿ ನಾವು ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿ, ನಾವು ಅಧಿಕಾರಕ್ಕೆ ಬಂದರೆ ನೀರಾವರಿಗೆ 50,000 ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಹೇಳಿದ್ದೆವು. ಅಧಿಕಾರಕ್ಕೆ ಬಂದ ನಂತರ 50,000 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದೇವೆ ಎಂದರು.
ಬೊಮ್ಮಾಯಿ ಅವರ ಸರ್ಕಾರ 40% ಕಮಿಷನ್ ಸರ್ಕಾರ. ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಒಬ್ಬೊಬ್ಬ ಅಭ್ಯರ್ಥಿಯಿಂದ 70, 80 ಲಕ್ಷದವರೆಗೆ ಲಂಚ ತಿಂದಿದ್ದಾರೆ. ನೇಮಕಾತಿ ವಿಭಾಗದ ಎಡಿಜಿಪಿ ಅಧಿಕಾರಿಯೊಬ್ಬರು ಜೈಲು ಸೇರಿದ್ದಾರೆ. ಇವರ ಜೊತೆ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದ ಮಂತ್ರಿಗಳು ಯಾರಾದರೂ ಜೈಲು ಸೇರಿದ್ದಾರ? ನಮ್ಮ ಪಕ್ಷದ ನಾಯಕರಾದ ಕಾಶಪ್ಪನವರು ನಿರಾಣಿಯವರ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ತನಿಖಾ ಸಮಿತಿಯನ್ನು ರಚನೆ ಮಾಡಿ, ಯಾರ ಮೇಲೆಲ್ಲಾ ಆರೋಪಗಳಿವೆ ಅದನ್ನು ತನಿಖೆ ಮಾಡಿಸಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದವರು ಘೋಷಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಬಿಜೆಪಿ ಸರ್ಕಾರ ಯಾವ ರೀತಿಯ ಆಡಳಿತವನ್ನು ಕೊಟ್ಟಿದೆ ಎಂದು ಅಗ್ನಿ ಪರೀಕ್ಷೆಯಾಗಿರುವ ಈ ಚುನಾವಣೆಯಲ್ಲಿ ಸರ್ಕಾರ ಎಲ್ಲಿ ವಿಫಲವಾಗಿದೆ, ಎಲ್ಲಿ ಜನ ವಿರೋಧಿ ನೀತಿ ತಾಳಿದ್ದಾರೆ ಎಂದು ಈ ಕಾರ್ಯಕ್ರಮದ ಮೂಲಕ ಜನರ ಮುಂದೆ ಇಡಲಾಗುತ್ತಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರು ನೀವು ರಸ್ತೆ, ನೀರು, ಚರಂಡಿ, ಮಹಿಳೆಯರ ಸುರಕ್ಷತೆ ವಿಚಾರವಾಗಿ ಮಾತನಾಡಬೇಡಿ, ಲವ್ ಜಿಹಾದ್, ಘರ್ ವಾಪಸಿ, ಕಬರಸ್ಥಾನ್ ಶಂಶಾನ್ ಬಗ್ಗೆ ಮಾತನಾಡಿ ಎಂದು ಹೇಳುತ್ತಾರೆ. ಈ ಗಾಂಪರ ಮೂರ್ಖರಿಗೆ ನೀವು ಬುದ್ಧಿ ಕಲಿಸದಿದ್ದರೆ ಇವರು ಸಂವಿಧಾನವನ್ನೇ ಬದಲಿಸುತ್ತಾರೆ. ಅಂಬೇಡ್ಕರ್ ಅವರು ಎಲ್ಲರೂ ಸಮಾನರು ಎಂಬ ಸಂವಿಧಾನ ನೀಡಿದರೆ ಅದನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. 75 ವರ್ಷಗಳ ಕಾಲ ಸ್ವತಂತ್ರ್ಯವಾಗಿ ಜೀವನ ಮಾಡಿದ್ದ ನೀವು ಅದನ್ನು ಮುಂದುವರಿಸಬೇಕಾದರೆ, ಪ್ರಜಾಪ್ರಭುತ್ವ ಸಂವಿಧಾನ, ಜಾತ್ಯಾತೀತ ತತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹರಿಪ್ರಸಾದ್ ಹೇಳಿದರು.



















































