ವಿಜಯಪುರ : ವಸುಧೈವ ಕುಟುಂಬಕಂ ಎನ್ನುವುದು ಭಾರತೀಯ ಸಂಸ್ಕೃತಿಯ ಮೂಲಾಧಾರ, ಈ ಉಕ್ತಿಯನ್ನು ಜೀವನದ ಉಸಿರಾಗಿಸಿಕೊಂಡು ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಬೆಳೆಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ
ವಿಜಯಪುರದ ಮಹಾತ್ಮಾ ಗಾಂಧಿ ಕಾಲೋನಿಯಲ್ಲಿ ಸೇವಾ ಭಾರತಿ ಹಾಗೂ ಲೋಕಹಿತ ಟ್ರಸ್ಟ್ ಸಹಯೋಗದಲ್ಲಿ ‘ಸಂವೇದನಾ’ ಎಂಬ ಸೇವಾ ಪ್ರಕಲ್ಪ – ಕುಷ್ಠರೋಗಿಗಳಿಗೆ ನಿತ್ಯ ಅನ್ನದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ ಅವರು, ಜಗತ್ತೇ ಒಂದು ಕುಟುಂಬ, ಇಡೀ ವಿಶ್ವವೇ ಒಂದು ಮನೆ, ಇಡೀ ತ್ರಿಲೋಕವೇ ಒಂದು ದೇಶ ಎಂಬ ಉದಾತ್ತ ಭಾವನೆಯ ಪ್ರತಿರೂಪವೇ ನಮ್ಮ ಭಾರತೀಯ ಸಂಸ್ಕೃತಿ ಎಂದರು.
ಅನಾಥ ಮಕ್ಕಳ ಸೇವೆ ಪ್ರತಿಯೊಬ್ಬರ ಕರ್ತವ್ಯ, ಯಾವ ಅನಾಥ ಮಕ್ಕಳಿಗೂ ತಾವು ಅನಾಥರು ಎಂಬ ಭಾವನೆ ಬರದಂತೆ ಸಮಾಜ ಅವನನ್ನು ಅಕ್ಕರೆಯಿಂದ ಕಾಣಬೇಕು, ಅವರ ಜೀವನ ರೂಪಿಸಬೇಕು ಎಂದು ಕರೆ ನೀಡಿದರು. ನಾವೆಲ್ಲರೂ ಒಂದೇ ಎಂಬ ಭಾವನೆ ಹೃದಯದಿಂದ ಬರಬೇಕು, ಹೃದಯದಿಂದ ಸೇವೆ ಮಾಡಬೇಕು, ಒಬ್ಬರಿಗೊಬ್ಬರು ಸಹಾಯ, ಸಹಕಾರ, ಸಹಯೋಗ ನೀಡುತ್ತಾ ಜೀವನದಲ್ಲಿ ಮುನ್ನಡೆಯಬೇಕು. ಈ ಸೇವಾ ಕಾರ್ಯವನ್ನೇ ಸಂಘವು ತನ್ನ ಧ್ಯೇಯವಾಗಿಸಿಕೊಂಡಿದೆ ಎಂದರು.
ಎಲ್ಲರಿಗೂ ಕಷ್ಟ, ಸುಖಗಳು ಬರುವುದು ಸಾಮಾನ್ಯ, ಕಷ್ಟಗಳು ಬಂದಾಗ ಕಷ್ಟದಲ್ಲಿರುವವರು ನಮ್ಮ ಕುಟುಂಬ ಸದಸ್ಯರೇ ಎಂದು ತಿಳಿದು ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು, ಅಭಯ ನೀಡಬೇಕು ಎಂದು ಪ್ರತಿಪಾದಿಸಿದರು. ಶಂಕರ ಎಂದರೆ ಶಿವ, ಶಿವ ಇಡೀ ಜಗತ್ತಿಗೆ ತಂದೆ, ಹೀಗಾಗಿ ಶಿವ ಭಕ್ತರೆಲ್ಲ ಬಂಧುಗಳೇ, ಇಡೀ ತ್ರಿಲೋಕವೇ ನಮ್ಮ ದೇಶ, ಇದು ಭಾರತೀಯರ ಕಲ್ಪನೆ ಎಂದರು. ಸೇವೆಯು ಜೀವನದ ಭಾಗವಾಗಬೇಕು, ಸೇವೆ ಎಂದರೆ ಒಂದು ಕರ್ತವ್ಯ, ರೋಗಿ ನಮ್ಮ ಮನೆಯಲ್ಲಿದ್ದರೆ ನಾವು ಆರೈಕೆ ಮಾಡುವುದಿಲ್ಲವೇ? ಹಾಗೆಯೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಪ್ರತಿಯೊಬ್ಬರನ್ನೂ ಕುಟುಂಬ ಸದಸ್ಯರೆಂದು ತಿಳಿದು ಆರೈಕೆ ಮಾಡಬೇಕು ಎಂದರು.
ಕೋವಿಡ್ ಕಾಲಘಟ್ಟದಲ್ಲಿ ಅನೇಕ ನೋವುಗಳನ್ನು ನೋಡಿದ್ದೇವೆ, ಅದೇ ಸಮಯದಲ್ಲಿ ಲಕ್ಷಾಂತರ ಜನರ ನಿಸ್ವಾರ್ಥ, ಅಪರ್ಣಾ ಮನೋಭಾವದ ಸೇವೆಯನ್ನೂ ನಾವು ಗಮನಿಸಿದ್ದೇವೆ, ಈ ಸೇವೆ ನಮಗೆ ಸ್ಪೂರ್ತಿಯಾಗಲಿ, ಸೇವೆ ಮಾಡುತ್ತಾ ಮುನ್ನಡೆಯರಿ ಎಂದು ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.
ಕುಷ್ಠರೋಗ ಬಂಧುಗಳ ಕಾಲೊನಿಯಲ್ಲಿ ಅನ್ನ ನೀಡುವ ಸೇವಾ ಕಾರ್ಯ ಪ್ರಾರಂಭಿಸಿರುವ ಶಿವಾನಂದ ನೇಕಾರ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದತ್ತಾಜಿಯವರು,1980 ದಶಕದಿಂದಲೇ ಈ ಕಾಲೋನಿಯ ಕುಷ್ಠರೋಗಿ ಬಂಧುಗಳ ಸಲುವಾಗಿ ದಿ. ವೆಂಕಟೇಶ ಗುರುನಾಯಕರು ನಮಗೆಲ್ಲಾ ಜೀವನ ನೀಡಿದ ಪುಣ್ಯಾತ್ಮರು ಎಂದರು. ಇದೇ ವೇಳೆ ಅವರು ಕುಷ್ಠರೋಗಿ ಬಂಧುಗಳ ಜೊತೆಗೆ ಸಹಪಂಕ್ತಿ ಭೋಜನ ಮಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ್ ವಿ.ನಾಗರಾಜ್, ಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಪ್ರಾಂತ ಪ್ರಚಾರಕ್ ನರೇಂದ್ರ, ಲೋಕಹಿತ ಟ್ರಸ್ಟ್‌ನ ಶ್ರೀಧರ ನಾಡಗೀರ, ವಿಭಾಗ ಸಂಘಚಾಲಕ ಚಿದಂಬರ ಕರಮರಕರ, ಜಿಲ್ಲಾ ಸಂಘಚಾಲಕ್ ಡಾ.ಸತೀಶ ಜಿಗಜಿನ್ನಿ ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಬಾಬುರಾವ್, ಟ್ರಸ್ಟಿ ಚಂದ್ರಶೇಖರ ಗೋಕಾಕ್, ರಮೇಶ, ಪ್ರಾಂತ ಸಂಯೋಜಕ ಶಂಕರ ಗುಮಾಸ್ತೆ ಸಹಿತ ಅನೇಕ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




















































ಕುಷ್ಠರೋಗ ಬಂಧುಗಳ ಕಾಲೊನಿಯಲ್ಲಿ ಅನ್ನ ನೀಡುವ ಸೇವಾ ಕಾರ್ಯ ಪ್ರಾರಂಭಿಸಿರುವ ಶಿವಾನಂದ ನೇಕಾರ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದತ್ತಾಜಿಯವರು,1980 ದಶಕದಿಂದಲೇ ಈ ಕಾಲೋನಿಯ ಕುಷ್ಠರೋಗಿ ಬಂಧುಗಳ ಸಲುವಾಗಿ ದಿ. ವೆಂಕಟೇಶ ಗುರುನಾಯಕರು ನಮಗೆಲ್ಲಾ ಜೀವನ ನೀಡಿದ ಪುಣ್ಯಾತ್ಮರು ಎಂದರು. ಇದೇ ವೇಳೆ ಅವರು ಕುಷ್ಠರೋಗಿ ಬಂಧುಗಳ ಜೊತೆಗೆ ಸಹಪಂಕ್ತಿ ಭೋಜನ ಮಾಡಿದರು. 
