ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಪರ್ಸಂಟೇಜ್ ಆರೋಪ ಕೇಳಿಬಂದಿರುವಾಗಲೇ ಮತ್ತೊಂದು ಭೂ ಕರ್ಮಕಾಂಡ ಆರೋಪದ ಹೊಡೆತವೂ ತಟ್ಟಿದೆ. ಉದ್ಯಾನನಗರಿಯಲ್ಲಿ ಪೆಟ್ರೋಲ್ ಜಂಪನಿಗೆ ಸಾರ್ವಜನಿಕ ಬಳಕೆಯ ಸಿಎ ಸೈಟ್ ಬಳಸಲು ಸರ್ಕಾರ ಅವಕಾಶ ಕಲ್ಪಿಸಲಾಗಿದ್ದು, ಈ ಜಮೀನು ಅತಿಕ್ರಮಣ ಮಾಡಲಾಗಿದೆ. ಈ ಅಕ್ರಮದ ಹಿಂದೆ ಪ್ರಭಾವಿಗಳ ಕರಿ ನೆರಳು ಆವರಿಸಿದೆ.
ಈ ಕರ್ಮಕಾಂಡ ಕುರಿತಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ನಡೆಸಿದ ಸುದ್ದಿಗೋಷ್ಠಿ ಗಮನಸೆಳೆಯಿತು. ಮಾಜಿ ಶಾಸಕರೂ ಆದ ರಮೇಶ್ ಬಾಬು ಅವರು, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರಿಗೆ ಈ ಭೂ ಕರ್ಮಕಾಂಡದ ಬಗ್ಗೆ ಮಾಹಿತಿ ಹಂಚಿಕೊಂಡರು. ಬೆಂಗಳೂರಿನ ನಾಗರೀಕ ಸೌಲಭ್ಯದ ನಿವೇಶನ ಸಂಖ್ಯೆ ಸಿಎ 12/1, ಬಿಟಿಎಂ 4ನೇ ಹಂತ, 2ನೇ ಬ್ಲಾಕ್‌ನಲ್ಲಿ ಬಿಡಿಎಯಿಂದ ಐಒಸಿಎಲ್‌ಗೆ ಗುತ್ತಿಗೆ ಪಡೆದಿರುವ ನಿವೇಶನಕ್ಕೆ ಭೂಗಳ್ಳರಿಂದ ಅಕ್ರಮವಾಗಿ ಅತಿಕ್ರಮಣ ನಡೆದಿದೆ. ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಶಾಮೀಲು ಮತ್ತು ಸರ್ಕಾರದ ಸಂಪೂರ್ಣ ನಿಷ್ಕ್ರಿಯತೆಯಿಂದ ಈ ಅವಾಂತರ ಸೃಷ್ಟಿಸಿಯಾಗಿದೆ ಎಂದು ರಮೇಶ್ ಬಾಬು ದೂರಿದರು.

ಏನಿದು ಅಕ್ರಮ..?
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗೆ ನೊಂದಾಯಿತ ದಾಖಲೆ ಸಂಖ್ಯೆ.BDA-1-05288-2019-20, CD No. BDAD458 ರ ಪ್ರಕಾರ 04-11-19 ರಂದು IOCL ಗೆ ಲೀಸ್ ಮೊತ್ತಕ್ಕೆ BDA 30 ವರ್ಷಗಳ ಅವಧಿಗೆ 12/1 ನಂಬರಿನ CA ಸೈಟನ್ನು ಗುತ್ತಿಗೆ ನೀಡಿದೆ. 07-11-2019 ರ ಸ್ವಾಧೀನ ಪತ್ರದ ಮೂಲಕ ಸ್ವಾಧೀನಕ್ಕೆ ನೀಡಿದೆ. ಈ ನಿವೇಶನದಲ್ಲಿ ಪೆಟ್ರೋಲಿಯಂ ಸಂಗ್ರಹಣೆ, ಅನುಮೋದನೆಯಂತಹ ಎಲ್ಲಾ ಅಗತ್ಯ ಅನುಮತಿಗಳು, ಸ್ಫೋಟಕಗಳ ಉಪ ನಿಯಂತ್ರಕರಿಂದ ಅನುಮತಿ ಪತ್ರ, ಕಟ್ಟಡ ಮಂಜೂರಾತಿ ಯೋಜನೆ ಇತ್ಯಾದಿಗಳನ್ನು ಪಡೆದು IOCL ಅಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಿದೆ ಎಂದವರು ಗಮನಸೆಳೆದರು.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಂಸ್ಥೆಗೆ ಹಂಚಿಕೆ ಮಾಡಿರುವ ಸಿಎ ನಿವೇಶನವನ್ನು ಯಾವುದೇ ವ್ಯಾಜ್ಯ ಅಥವಾ ಅಡೆತಡೆಗಳಿಲ್ಲದೆ ನೀಡಬೇಕು. ಸರ್ಕಾರದ ಯೋಜನೆಗಳಿಗೆ ಅಡ್ಡಿಪಡಿಸುವ ಭೂಗಳ್ಳರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಸರ್ಕಾರೀ ಸ್ವತ್ತುಗಳನ್ನು ಕಬಳಿಸುವ ಭೂಗತ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದರಲ್ಲಿ ಸರ್ಕಾರೀ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರಮೇಶ್ ಬಾಬು ಆರೋಪಿಸಿದರು.
BDA ಹಂಚಿಕೆ ಮಾಡಿರುವ ನಾಗರೀಕ ನಿವೇಶನದಲ್ಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸ್ವತ್ತನ್ನು ಕಬಳಿಸುವ ವ್ಯವಸ್ಥಿತ ಹುನ್ನಾರ ಬೆಂಗಳೂರಿನಲ್ಲಿ ನಡೆಯುತ್ತಿದೆ. IOCLಗೆ ಹಂಚಿಕೆ ಆಗಿರುವ ಮೇಲಿನ ನಿವೇಶನವು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದ್ದು, ಅದನ್ನು ಕಬಳಿಸಲು ಮಾಜಿ ಕಾರ್ಪೊರೇಟರ್ ಗಳು ಮತ್ತು ಕೆಲವು ಭೂಗಳ್ಳರು ದಾಖಲೆಗಳನ್ನು ಸೃಷ್ಟಿ ಮಾಡಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಗೆ ತಡೆಯೊಡ್ಡಿ ಅಲ್ಲಿನ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದೂ ಅವರು ಒಟ್ಟಾರೆ ಬೆಳವಣಿಗೆಯತ್ತ ಬೆಳಕುಚೆಲ್ಲಿದರು.
28-07-2022ರಂದು ಮುಖ್ಯಮಂತ್ರಿಗೆ ಪತ್ರ ಬರೆದು ನಾಗರೀಕ ನಿವೇಶನದ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಸೂಕ್ತ ರಕ್ಷಣೆ ನೀಡಲು ಪತ್ರ ಬರೆದಿರುತ್ತೇನೆ. ಮುಖ್ಯಮಂತ್ರಿಗಳು ನನ್ನ ಪತ್ರದ ಮೇಲೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿರುತ್ತಾರೆ. ಆದರೆ ನಗರಾಭಿವೃದ್ಧಿ ಇಲಾಖೆಯ ಕೆಲವು ಅಧಿಕಾರಿಗಳು ಈ ದಂದೆಯಲ್ಲಿ ಭಾಗಿಯಾಗಿರುವುದರಿಂದ IOCL ಸಂಸ್ಥೆಗೆ ಯಾವುದೇ ಸಹಕಾರವನ್ನು ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ ರಮೇಶ್ ಬಾಬು, ನಗರಾಭಿವೃದ್ಧಿ ಇಲಾಖೆಯ ಶಾಮೀಲು ಅಧಿಕಾರಿಗಳನ್ನು ತನಿಖೆ ಮೂಲಕ ದಂಡಿಸದಿದ್ದರೆ ಬೆಂಗಳೂರಿನ ಭೂಗಳ್ಳರ ಕ್ರಮವನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ, ಸರ್ವೇ ಇಲಾಖೆಯ ಎಡಿಎಲ್‌ಆರ್ ಮತ್ತು ಬಿಡಿಎ ಸರ್ವೇಯರ್‌ಗಳು ಜಂಟಿ ಸಮೀಕ್ಷೆ ಮಾಡಿ ಐಒಸಿಎಲ್ ಗುತ್ತಿಗೆ ಪಡೆದ ಸಿಎ ಸೈಟ್‌ಗೆ ಕ್ಲೀನ್ ಚಿಟ್ ನೀಡಿದೆ . ಆದರೂ ಭೂಗಳ್ಳರು ಐಒಸಿಎಲ್ ಸಂಸ್ಥೆಯು ಸದರಿ ನಿವೇಶನದಲ್ಲಿ ಕೆಲಸ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದ ಅವರು, IOCL ಇಲ್ಲಿ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಕಾರ್ಯಾಚರಣೆಯ ವೆಚ್ಚ, ಭೂಗತ ಸಂಗ್ರಹಣೆ / ಟ್ಯಾಂಕ್‌ನಲ್ಲಿನ ಡೀಸೆಲ್, ವೇಳಾಪಟ್ಟಿ ಆಸ್ತಿ, ಸಂಬಳ ಇತ್ಯಾದಿ ಸೇರಿದಂತೆ ಘಟಕಕ್ಕೆ ಭಾರಿ ಮೊತ್ತವನ್ನು ಹೂಡಿಕೆ ಮಾಡಿದೆ. ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ನಾಗರಿಕ ಸೌಲಭ್ಯದ ನಿವೇಶನ ನೀಡುವ ಸಂಪೂರ್ಣ ಉದ್ದೇಶ ಮತ್ತು ಕಾರ್ಯ ವಿಫಲವಾಗಿದೆ. ಅನೇಕ ಉದ್ಯೋಗಿಗಳು ಸಂಸ್ಥೆಯನ್ನು ಅವಲಂಬಿಸಿದ್ದಾರೆ. ಭೂಗಳ್ಳರು ಅಕ್ರಮವಾಗಿ ಅತಿಕ್ರಮಿಸಲು ನಿರಂತರ ಅಡಚಣೆಯನ್ನು ಉಂಟುಮಾಡುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಯು ನಾಗರೀಕ ನಿವೇಶನವನ್ನು ಮುಕ್ತವಾಗಿ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ ರಮೇಶ್ ಬಾಬು, 2019ರಲ್ಲಿ ಸಂಸ್ಥೆಗೆ ನಿವೇಶನ ಹಂಚಿಕೆಯಾಗಿದ್ದು, ಈ ಸಂಸ್ಥೆಯು ನಿವೇಶನ ಉಪಯೋಗಿಸಿಕೊಳ್ಳಲು ಅಡ್ಡಿಪಡಿಸಿರುವ ಭೂಗಳ್ಳರ ಮೇಲೆ ಮತ್ತು ಭೂಗಳ್ಳರಿಗೆ ಪರೋಕ್ಷವಾಗಿ ಸಹಕಾರ ನೀಡಿರುವ ನಗರಾಭಿವೃದ್ಧಿ ಇಲಾಖೆಯ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದೂ ಒತ್ತಾಯಿಸಿದರು.