ಬೆಂಗಳೂರು: ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿರುವ ಪ್ರಕರಣದಲ್ಲಿ ಸರ್ಕಾರ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರೇ ಆರೋಪಿಗಳಾಗಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದೆ. ಈ ಸಂಬಂಧ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಕುರಿತಂತೆ ಕೆಪಿಸಿಸಿ ನಾಯಕ ಲಕ್ಷ್ಮಣ್ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕರೂ ಆದ ರಮೇಶ್ ಬಾಬು ಸುದ್ದಿಗೋಷ್ಠಿ ನಡೆಸಿ ‘ಆಪರೇಷನ್ ಓಟರ್ ಲಿಸ್ಟ್’ ಕರ್ಮಕಾಂಡದ ಗಂಭೀರತೆಯತ್ತ ಬೆಳಕು ಚೆಲ್ಲಿದರು. ಇಡೀ ದೇಶದ ಚುನಾವಣಾ ವ್ಯವಸ್ಥೆ ತಲೆತಗ್ಗಿಸುವಂತೆ ಅಧಿಕಾರ ದುರುಪಯೋಗ ಮಾಡಿಕೊಂಡು, ಮತದಾರರ ಮಾಹಿತಿ ಕದ್ದು ಖಾಸಗಿಯವರಿಗೆ ನೀಡುವ ಪ್ರಯತ್ನ ನಡೆದಿದೆ ಎಂದವರು ದೂರಿದರು.
ಈ ಮತದಾರರ ಪಟ್ಟಿ ಅಕ್ರಮ ಕುರಿತಂತೆ ಕಾಂಗ್ರೆಸ್ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಇದಕ್ಕೆ ಸ್ಪಂದಿಸಿರುವ ಆಯೋಗವು ಒಬ್ಬ ಅಧಿಕಾರಿಯನ್ನು ನೇಮಕ ಮಾಡಿದೆ ಎಂದು ರಮೇಶ್ ಬಾಬು ತಿಳಿಸಿದರು.
‘ದೂರು ನೀಡಿದ್ದು ನಾನೇ ಮೊದಲು..’:
‘ಕಳ್ಳನ ಮನಸ್ಸು ಹುಳ್ಳಗೆ’ ಎಂಬಂತೆ ಬಿಜೆಪಿಯವರು ವರ್ತಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ನಾವು ಮೊದಲೇ ಹೇಳಿದ್ದೆವು. ಆದರೆ ಬಿಜೆಪಿಯವರು ತರಾತುರಿಯಲ್ಲಿ ಫ್ಯಾಕ್ಸ್ ಮೂಲಕ ಕೇಂದ್ರ ಆಯೋಗಕ್ಕೆ ದೂರು ನೀಡಿ, ತಾವೇ ಮೊದಲು ದೂರು ನೀಡಿರುವುದಾಗಿ ಹೇಳಿ ಸುದ್ದಿ ಮಾಡಿಕೊಂಡಿದ್ದಾರೆ ಎಂದು ರಮೇಶ್ ಬಾಬು ವ್ಯಂಗ್ಯವಾಡಿದರು. ಬಿಜೆಪಿಯವರು ಹೇಳಿಕೊಂಡಿದ್ದೇ ಬೇರೆ ಬೆಳವಣಿಗೆ ನಡೆದಿರುವುದೇ ಬೇರೆ ಎಂದ ಅವರು, ಬಿಜೆಪಿಗಿಂತ ಮುಂಚಿತವಾಗಿ ನಾನೇ ಕೇಂದ್ರ ಚುನಾವಣಾ ಆಯೋಗಕ್ಕೆ ಇ ಮೇಲ್ ಮೂಲಕ ದೂರು ಸಲ್ಲಿಸಿದ್ದೇನೆ ಎಂದರು. ಈ ಸಂಬಂಧದ ದಾಖಲೆಗಳನ್ನು ಸುದ್ದಿಗಾರರಿಗೆ ನೀಡಿದರು.
ಕಾನೂನು ಏನು ಹೇಳುತ್ತೆ..?
ಸಂವಿಧಾನದ 324ನೇ ಆರ್ಟಿಕಲ್ ಅನ್ವಯ ಸ್ವತಂತ್ರ ಚುನಾವಣಾ ಆಯೋಗ ರಚನೆಯಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ಉದ್ದೇಶದ ಸ್ವಾಯತ್ತ ಸಂಸ್ಥೆಯಾಗಿದೆ. ಜನಪ್ರತಿನಿಧಿ ಕಾಯ್ದೆ ಅನುಗುಣವಾಗಿ ಸೆಕ್ಷನ್ 13ಎ ಪ್ರಕಾರ ಜಿಲ್ಲಾ ಮಟ್ಟದಲ್ಲಿ ಡಿಇಒ ನೇಮಕ ಮಾಡಲಾಗಿದೆ. ಇವರು ಬಿಎಲ್ಒ (ಬೂತ್ ಚುನಾವಣಾಧಿಕಾರಿ) ಹಾಗೂ ಎಎಲ್ಒ (ಕ್ಷೇತ್ರ ಚುನಾವಣಾಧಿಕಾರಿ) ಗಳನ್ನು ನೇಮಕ ಮಾಡುತ್ತಾರೆ. ಈ ವ್ಯವಸ್ಥೆಯನ್ನೇ ಅನುಕರಿಸಿ ಅಕ್ರಮ ಎಸಗಲಾಗಿದೆ ಎಂದು ಅವರು ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದರು.
ಕೇಂದ್ರದಿಂದಲೇ ತನಿಖೆ ಸೂಕ್ತ..
ತುಷಾರ್ ಅಮಾನತು ಅಗತ್ಯ..?
ಇದೇ ವೇಳೆ, ಕಾನೂನು ತಜ್ಞರೂ ಆಗಿರುವ ರಮೇಶ್ ಬಾಬು, ಈ ಪ್ರಕರಣದಲ್ಲಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರೂ ತಪ್ಪಿತಸ್ಥರು ಎಂದು ಬೊಟ್ಟುಮಾಡಿದರಲ್ಲದೆ, ಅವರ ಅಮಾನತು ಆಗಲೇಬೇಕಿದೆ ಎನ್ನುವ ಮೂಲಕ ಪ್ರಕರಣದ ಗಂಭೀರತೆಯತ್ತ ಬೆಳಕುಚೆಲ್ಲಿದರು.
ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆ ಮಾಡಲು ಸಾಧ್ಯವಿಲ್ಲ, ಅದನ್ನು ಕೇಂದ್ರ ಚುನಾವಣಾ ಆಯೋಗ ಮಾಡಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಅದಕ್ಕೆ ಸಹಮತ ವ್ಯಕ್ತಪಡಿಸಿ ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದ ರಮೇಶ್ ಬಾಬು, ಈ ಪ್ರಕರಣವನ್ನು ಗಮನಿಸಿದರೆ, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯಾದ ತುಷಾರ್ ಗಿರಿನಾಥ್ ಅವರು ಬೆಂಗಳೂರು ವ್ಯಾಪ್ತಿಯಲ್ಲೇ 28 ಕ್ಷೇತ್ರಗಳಿವೆ. ತುಷಾರ್ ಗಿರಿನಾಥ್ ಅವರ ಅಧೀನದಲ್ಲಿ 28 ಎಆರ್ಒ’ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದೀಗ ಆರೋಪದಿಂದ ತಪ್ಪಿಸಿಕೊಳ್ಳಲು ಮೂವರು ಎಆರ್ಒಗಳನ್ನು ವಜಾ ಮಾಡಿ ತನಿಖೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿ ನಿಜಕ್ಕೂಅಮಾನತು ಆಗಬೇಕಾಗಿರುವುದು ತುಷಾರ್ ಗಿರಿನಾಥ್ ಎಂದು ರಮೇಶ್ ಬಾಬು ಹೇಳಿದರು.
ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.
ಅದರಿಂದ ತಪ್ಪಿಸಿಕೊಳ್ಳಲು ಮೂವರು ಎಆರ್ಒಗಳನ್ನು ವಜಾ ಮಾಡಿ, ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಇಲ್ಲಿ ನಿಜಕ್ಕೂ ವಜಾಗೊಳ್ಳಬೇಕಾಗಿರುವುದು ತುಷಾರ್ ಗಿರಿನಾಥ್ ಅವರು!
– @RameshBabuKPCC pic.twitter.com/2RoKlAiCUT— Karnataka Congress (@INCKarnataka) November 24, 2022
ಚುನಾವಣಾ ಆಯೋಗದ ಕಾನೂನು ಪ್ರಕಾರ 1950ರ ಜನಪ್ರತಿನಿಧಿ ಕಾಯ್ದೆ ಕಲಂ 32ರ ಅಡಿಯಲ್ಲಿ ಯಾವುದೇ ಚುನಾವಣಾ ಅಧಿಕಾರಿ ಅಕ್ರಮಗಳಿಗೆ ಶಾಮೀಲಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕನಿಷ್ಠ 3 ತಿಂಗಳಿಂದ 2 ವರ್ಷಗಳ ವರೆಗೂ ಶಿಕ್ಷೆಯಾಗುವಂಥದ್ದು. ಇದನ್ನು ಚುನಾವಣಾ ಆಯೋಗವೇ ಮಾಡಬೇಕಾಗುತ್ತದೆ. ಆ ಕಾರಣಕ್ಕಾಗಿ ನಾನು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದವರು ವಿವರಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ತನ್ನ ಸಚಿವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡುವ, ತಮಗೆ ಅನುಕೂಲವಾಗುವ ಮತದಾರರ ಹೆಸರು ಸೇರಿಸುವ ಕೆಲಸ ಮಾಡಿದೆ ಎಂದು ದೂರಿದ ಅವರು, ನಕಲಿ ಬಿಎಲ್ಒ ಗುರುತಿನ ಚೀಟಿ ವಿತರಣೆ ಹೊಣೆಯನ್ನು ತುಷಾರ್ ಗಿರಿನಾಥ್ ಅವರೇ ಹೊರಬೇಕು. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ತುಷಾರ್ ಗಿರಿನಾಥ್ ಅವರನ್ನು ಚುನಾವಣಾಧಿಕಾರಿ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಅವರು ಹಿರಿಯ ಐಎಎಸ್ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಬಾಕಿಗೆ ಒಳಪಟ್ಟು ಅವರನ್ನು ಅಮನಾತು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.














































































