ಬೆಂಗಳೂರು: ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ 12 ಹೈಡೆನ್ಸಿಟಿ ರಸ್ತೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ ಐಡಿಎಲ್ ವತಿಯಿಂದ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡರು.
ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಿನನಿತ್ಯವೂ ಬರುತ್ತಾರೆ. ಭಾರತದಲ್ಲಿ ನವದೆಹಲಿಯಂತೆ ಬೆಂಗಳೂರಿಗೂ ದೊಡ್ಡ ಸಂಖ್ಯೆಯಲ್ಲಿ ವಿದೇಶಿಯರು ಭೇಟಿ ನೀಡುತ್ತಾರೆ. ಪ್ರತಿ ದಿನ 5000 ಕ್ಕಿಂತ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ನಗರದಲ್ಲಿ 1.30 ಕೋಟಿ ಜನಸಂಖ್ಯೆಯಿದ್ದು, 1.56 ಕೋಟಿ ವಾಹನ ಸಂಖ್ಯೆಯಿದೆ. ಅಂತರಾಷ್ಟ್ರೀಯ ನಗರಗಳಲ್ಲಿ ಜನದಟ್ಟಣೆ ಇದ್ದೇ ಇರುತ್ತದೆ. ಈ ಜನದಟ್ಟಣೆಯ ಸವಾಲನ್ನು ಎದುರಿಸಲು ಹತ್ತು ಹಲವಾರು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. 12 ಹೈ ಡೆನ್ಸಿಟಿ ರಸ್ತೆ ನಿರ್ಮಾಣಕ್ಕೆ 280 ಕೋಟಿ ರೂ.ಗಳಿಗೆ ಮಂಜೂರಾತಿ ನೀಡಲಾಗಿದೆ. ಇವುಗಳು ದೇಶದ ವಿವಿಧ ಪ್ರಮುಖ ನಗರಗಳನ್ನು ಬೆಂಗಳೂರಿಗೆ ಸಂಪರ್ಕಿಸುವ ರಸ್ತೆಗಳಾಗಿವೆ. ನಗರೋತ್ಥಾನ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸುಮಾರು 8000 ಕೋಟಿ ರೂ.ಗಳನ್ನು ವಿವಿಧ ಯೋಜನೆಗಳಡಿ ನೀಡಲಾಗಿದೆ ಎಂದರು.
ನಗರದಲ್ಲಿ ವಾಹನ ದಟ್ಟಣೆಯ ನಿರ್ವಹಣೆಗಾಗಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ. ವಿಶೇಷ ಸಾರಿಗೆ ಆಯುಕ್ತರ ಕಚೇರಿಯನ್ನು ಹಾಗೂ ನೂತನ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಹೆಚ್ಚಿನ ವಾಹನ ಸಂದಣಿಯಿರುವ ಪ್ರದೇಶಗಳಿಗೆ ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ನಿರ್ಮಾಣಕ್ಕೆ ಅನುಮೋದನೆ ಪಡೆಯಲು ಬೆಂಗಳೂರಿನ ನಗರ ಆಯುಕ್ತರಿಗೆ ಸೂಚಿಸಲಾಗಿದೆ. ನಗರದಲ್ಲಿ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಮೂಲಸೌಕರ್ಯವನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. ನಿರ್ಭಯಾ ಯೋಜನೆಯಡಿ ನಗರದಾದ್ಯಂತ 7500 ಇಂಟೆಲಿಜೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ತಡೆರಹಿತ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ವ್ಯವಸ್ಥಿತಗೊಳಿಸಲು ಮಾಸ್ಟರ್ ಪ್ಲಾನ್ ನ್ನು ರೂಪಿಸಲಾಗುವುದು. ರಾಜಾ ಕಾಲುವೆ ಹಾಗೂ ಉಪಕಾಲುವೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದಕ್ಕೆ ಬೇಕಾದ ಅನುದಾನವನ್ನು ನೀಡಲಾಗಿದೆ. ಮೇಲಿನ ಎಲ್ಲಿನ ಯೋಜನೆಗಳಿಂದ ಬೆಂಗಳೂರು ನಗರವನ್ನು ಅಭಿವೃದ್ಧಿ ಪಥದಲ್ಲಿ ಸರ್ಕಾರ ಕೊಂಡೊಯ್ಯಲಿದೆ ಎಂದರು ತಿಳಿಸಿದರು.



















































