ಬೆಂಗಳೂರು: ಬಳ್ಳಾರಿಯಲ್ಲಿ ಈ ತಿಂಗಳ 20ರಂದು ಬಿಜೆಪಿ ಎಸ್ಟಿ ಮೋರ್ಚಾ ನವಶಕ್ತಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ಯಶಸ್ಸಿಗಾಗಿ ಅಂತಿಮ ತಯಾರಿ ನಡೆದಿದೆ.
ಸಮಾವೇಶ ನಡೆಯುವ ಸ್ಥಳವನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಈ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸರಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರೂ ಆದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕೇಂದ್ರ – ರಾಜ್ಯ ಸರಕಾರಗಳ ಸಚಿವರು, ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕಾಗಿ ಎಲ್ಲ ಪೂರ್ವತಯಾರಿ ನಡೆದಿದೆ ಎಂದು ವಿವರಿಸಿದರು.
ಸಮಾವೇಶದ ಯಶಸ್ವಿಗೆ 41 ಸಮಿತಿ ರಚಿಸಿದ್ದು, 5 ಸಾವಿರ ಕಾರ್ಯಕರ್ತರನ್ನು ಜೋಡಿಸಿದ್ದೇವೆ. 200ಕ್ಕೂ ಅಧಿಕ ಶೌಚಾಲಯಗಳಿರುತ್ತವೆ. 28 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ. 8 ಸಾವಿರದಿಂದ 10 ಸಾವಿರ ಬಸ್ಸುಗಳು ಬರಲಿವೆ. 25 ಸಾವಿರ ಕ್ರೂಸರ್ ವಾಹನಗಳು, 10 ಸಾವಿರ ಕಾರುಗಳು, 25 ಸಾವಿರ ಬೈಕ್ಗಳು ಬರಲಿವೆ; 2 ಹೆಲಿಪ್ಯಾಡ್ಗಳೂ ಇರಲಿವೆ ಎಂದು ಶ್ರೀರಾಮುಲು ತಿಳಿಸಿದರು.
15ರಿಂದ 20 ಸಾವಿರ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಶಾಸಕ ಸೋಮಶೇಖರ ರೆಡ್ಡಿಯವರು ಕಾಲ್ನಡಿಗೆಯಲ್ಲಿ ಬರಲಿದ್ದಾರೆ. 160 ಕಲಾತಂಡಗಳು ಭಾಗವಹಿಸಲಿವೆ ಎಂದು ಶ್ರೀರಾಮುಲು ವಿವರಿಸಿದರು.
130 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯುತ್ತಿದೆ. ಸಮಾವೇಶದ ವೇದಿಕೆ ಮತ್ತು ಕಲಾವಿದರಿಂದ ಮನೋರಂಜನೆ ನೀಡುವ ವೇದಿಕೆ ರಚಿಸಲಾಗಿದೆ. 3.20 ಲಕ್ಷ ಚದರಡಿ ಪೆಂಡಾಲ್ ವ್ಯವಸ್ಥೆ ಮಾಡಿದ್ದೇವೆ. 1 ಲಕ್ಷ ಚದರ ಅಡಿಯಲ್ಲಿ ಅಡುಗೆ ಸಿದ್ಧಗೊಳ್ಳಲಿದೆ. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಊಟದ ವ್ಯವಸ್ಥೆ ಮಾಡಲಿದ್ದೇವೆ. 300ಕ್ಕೂ ಹೆಚ್ಚು ಊಟದ ಕೌಂಟರ್ ಇರಲಿವೆ. 3 ಸಾವಿರ ಕಾರ್ಯಕರ್ತರು ಊಟದ ವ್ಯವಸ್ಥೆಗೆ ಸಹಕರಿಸಲಿದ್ದಾರೆ ಎಂದರು. ಬಿಜೆಪಿ ಸರಕಾರಗಳ ಜನಪರ ಕಾರ್ಯಕ್ರಮಗಳನ್ನು ಎಸ್ಸಿ, ಎಸ್ಟಿ ಸಮುದಾಯ ಮತ್ತು ಜನರಿಗೆ ತಿಳಿಸಲಾಗುತ್ತದೆ ಎಂದು ವಿವರಿಸಿದರು. ಮೀಸಲಾತಿ ಹೆಚ್ಚಳವನ್ನು ಸಂಭ್ರಮಿಸುವ ಹಬ್ಬ- ಐತಿಹಾಸಿಕ ಸಮಾವೇಶ ಇದಾಗಲಿದೆ ಎಂದು ತಿಳಿಸಿದರು.
‘ನ ಭೂತೋ…’ ಎಂಬಂತೆ ಕಾರ್ಯಕ್ರಮ ನಡೆಯಲಿದೆ. ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಿದ್ದೇವೆ. ಸಣ್ಣಪುಟ್ಟ ವ್ಯತ್ಯಾಸವಾದರೆ ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಮನೆಮನೆಯೂ ಕೇಸರಿಮಯವಾಗಿದೆ ಎಂದರು.

























































