ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿ ಪ್ರಾರಂಭವಾಗಿರುವ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ರೈಲು ಯಾತ್ರಾರ್ಥಿಗಳನ್ನು ಕಾಶಿಯಲ್ಲಿ *ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ಸ್ವಾಗತಿಸಲಿದ್ದಾರೆ.
ವಾರಣಾಸಿಗೆ ಇಂದು ಆಗಮಿಸಿರುವ ಸಚಿವರು ನಾಳೆ ಮಧ್ಯಾಹ್ನ ಕಾಶಿಗೆ ಆಗಮಿಸಲಿರುವ ರೈಲು ಪ್ರವಾಸಿಗರಿಗೆ ರೈಲ್ವೇ ನಿಲ್ದಾಣದಲ್ಲಿ ಸ್ವಾಗತ ಕೋರಲಿದ್ದಾರೆ. ಇದೇ ವೇಳೆ ಪ್ರವಾಸಿಗರಿಗೆ ಕಾಯ್ದಿರಿಸಲಾಗುವ ವಸತಿ, ಊಟ ಮತ್ತು ಇನ್ನಿತರೆ ಸೌಲಭ್ಯಗಳನ್ನು ಪರಿಶೀಲಿಸಲಿದ್ದಾರೆ. ಕಾಶಿಯಲ್ಲಿರುವ ಹನುಮಾನ್ ಘಾಟ್ ನಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೂ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಇದೇ ವೇಳೆ, ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನದ ಮೊದಲ ಯಾತ್ರೆಗೆ 600 ಜನರು ಬುಕ್ಕಿಂಗ್ ಮಾಡಿದ್ದರು. ಬುಕ್ಕಿಂಗ್ ಮಾಡಿದ್ದ ಎಲ್ಲಾ ಯಾತ್ರಾರ್ಥಿಗಳು ರೈಲನ್ನ ಹತ್ತಿದ್ದು, ಐಆರ್‌ಸಿಟಿಸಿ ಕಡೆಯಿಂದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೊಡೆಯನ್ನು ಉಚಿತವಾಗಿ ವಿತರಿಸಲಾಗಿದೆ.
ಈಗಾಗಲೇ ರೈಲು ಪ್ರಯಾಣದಲ್ಲಿರುವ ಕೆಲವು ಯಾತ್ರಾರ್ಥಿಗಳೊಂದಿಗೆ ಸಚಿವರು ಧೂರವಾಣಿ ಮುಖಾಂತರ ಮಾತನಾಡಿದಾಗಿ ಪ್ರಯಾಣಿಕರು, ಪ್ರಯಾಣದಲ್ಲಿ ಅತ್ಯುತ್ತಮ ಸೌಲಭ್ಯ ಒದಗಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತ್ ಗೌರವ್ ಯಾತ್ರಾ ಸೌಲಭ್ಯವನ್ನು ಪಡೆದ ಮೊದಲ ರಾಜ್ಯ ಕರ್ನಾಟಕ ಎನ್ನುವ ಖ್ಯಾತಿ ಪಡೆದಿರುವುದನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟರ್‌ನಲ್ಲಿ ಹಂಚಿಕೊಂಡಿರುವುದು ಬಹಳ ಸಂತಸದ ವಿಷಯ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ಲಾಘನೆಗೆ ಒಳಪಟ್ಟ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಬಹಳಷ್ಟು ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಮೊದಲ ಟ್ರೈನ್‌ನ ಯಾತ್ರಾರ್ಥಿಗಳು ಸಂತಸದಿಂದ ಯಾತ್ರೆಯನ್ನು ನಡೆಸುತ್ತಿದ್ದಾರೆ. ಈ ಯಾತ್ರಾರ್ಥಿಗಳಿಗೆ ಕಾಶಿಯಲ್ಲಿ ಸ್ವಾಗತ ಕೋರುವ ಮೂಲಕ ನಮ್ಮ ಇಲಾಖೆಯ ಬದ್ದತೆಯನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವೆ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.