ಮುಂಬಯಿ: ಲೂಸ್ ಟಾಕ್ ಏನೆಲ್ಲಾ ಅವಾಂತರ ಸೃಷ್ಟಿಸುತ್ತದೆ ಎಂಬುದಕ್ಕೆ ಈ ಪ್ರಕರಣದ ತೀರ್ಪು ಸಾಕ್ಷಿಯಾಗಿದೆ. ಅಪ್ರಾಪ್ತೆಯನ್ನು ಐಟಂ ಎಂದು ಕರೆದ ಆರೋಪಿಗಳಿಗೆ ಮುಂಬಯಿ ನ್ಯಾಯಾಲಯವು ಇತ್ತೀಚೆಗೆ ಒಂದೂವರೆ ವರ್ಷ ಕಾಲ ಜೈಲು ಶಿಕ್ಷೆ ಪ್ರಕಟಿಸಿದೆ. ಈ ತೀರ್ಪು ಭಾರೀ ಚರ್ಚೆಗೆ ಗ್ರಾಸವಾಗಿದೆ.
2015 ಜುಲೈನಲ್ಲಿ ಶಾಲೆಯಿಂದ ವಾಪಸಾಗುತ್ತಿದ್ದ ಸುಮಾರು 15 ವರ್ಷದ ಬಾಲಕಿಯನ್ನು ಅಬ್ರಾರ್ ನೂರ್ ಮೊಹಮ್ಮದ್ ಖಾನ್ಬಾ ಎಂಬಾತ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಕಿರುಕುಳ ನೀಡಿದ್ದಾರೆಂಬುದು ಆರೋಪ. ಬಾಲಕಿಯನ್ನು ರೇಗಿಸಿರುವ ಈ ಆರೋಪಿಗಳು ಆಕೆಯನ್ನು ಐಟಂ ಎಂದು ಬಣ್ಣಿಸಿದ್ದಾರೆನ್ನಲಾಗಿದೆ. ಆಕೆಯ ಕೂದಲು ಎಳೆದು ಕಿರುಕುಳ ನೀಡಿದ್ದಾರೆಂದೂ ಆರೋಪಿಸಲಾಗಿದೆ.
ಈ ಪ್ರಕರಣ ಕುರಿತು ತನಿಖೆ ನಡೆಸಿದ್ದ ಪೊಲೀಸರ ವರದಿ ಆಧರಿಸಿ ವಿಚಾರಣೆ ನಡೆಸಿದ ಬೋರಿವಲಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ ಅನ್ಸಾರಿ ಅವರು ಅಪರಾಧಿಗಳಿಗೆ 18 ತಿಂಗಳ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಿದ್ದಾರೆ. ಫೋಕ್ಸೋ ಕಾಯ್ದೆಯಡಿ ಪ್ರಕಟಿಸಲಾದ ಈ ತೀರ್ಪಿಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಹೆಣ್ಮಕ್ಕಳನ್ನು ಅಗೌರವದಿಂದ ಕಾಣುವ, ಐಟಂ ಎಂಬುದಾಗಿ ಬಣ್ಣಿಸುವವರಿಗೆ ಈ ತೀರ್ಪು ಎಚ್ಚರಿಕೆಯ ಘಂಟೆಯಂತಿದೆ.













































































