ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ‘ಕಾಂತಾರ’ ಸಿನಿಮಾ ಹೊಸ ತರಂಗವನ್ನೇ ಎಬ್ಬಿಸಿದೆ. ತುಳುನಾಡಿನ ಸಂಸ್ಕೃತಿಯು ಈ ಸಿನಿಮಾದಲ್ಲಿ ಪ್ರತಿಬಿಂಬಿತವಾಗಿದೆ. ಭೂತಾರಾದನೆ ಹಾಗೂ ದೈವ ಕೋಲ ಇತ್ಯಾದಿ ಆಚರಣೆಗಳ ಮೂಲಕ ಕರುನಾಡಿನ ಕರಾವಳಿ ಜನರ ಬದುಕು-ಚಿತ್ರಣ ಹೇಗಿದೆ ಎಂಬುದೂ ಅನಾವರಣವಾಗಿದೆ.
‘ಕಾಂತಾರ’ ಚಿತ್ರವು ತನ್ನ ಸಿನಿಮಾ ತಂಡಕ್ಕೆ ವಾಣಿಜ್ಯಿಕ ಯಶಸ್ಸನ್ನಷ್ಟೇ ತಂದುಕೊಟ್ಟಿದ್ದಲ್ಲ, ದೇಶವ್ಯಾಪಿ ವಿವಿಧ ವಿಚಾರಧಾರೆಗಳ ಬಗ್ಗೆ ಚಿಂತನ-ಮಂಥನಕ್ಕೂ ಮುನ್ನುಡಿ ಬರೆದಿದೆ. ಹಾಗಾಗಿಯೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಮಾಲಿವುಡ್ ಸಹಿತ ಭಾರತದ ಚಿತ್ರೋದ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಿತು.
ಈ ನಡುವೆ, ಭೂತಾರಾಧನೆಯೇ ಮುಖ್ಯ ಕಥಾವಸ್ತು ಆಗಿರುವ ‘ಕಾಂತಾರ’ದಲ್ಲಿ ಕೇದ್ರಬಿಂದುವಾಗಿದ್ದುದು ದೈವ ನರ್ತಕರು. ಇವರ ಬದುಕು-ಬವಣೆ ಬಗ್ಗೆ ‘ಕಾಂತಾರ’ ಅನಾವರಣ ಮಾಡಿದ್ದು, ಇದಕ್ಕೆ ಧ್ವನಿಗೂಡಿಸಿದ ಜನತೆ, ‘ಈ ಸಮುದಾಯಕ್ಕೆ ಸರ್ಕಾರದ ಕೊಡುಗೆ ಏನು’ ಎಂದು ಪ್ರಶ್ನಿಸಲಾರಂಭಿಸಿದೆ.
‘ನಳಿಕೆ’ ಎಂಬ ಅರ್ಥವನ್ನು ರೂಢಿಸಿಕೊಂಡಿರುವ ಈ ದೈವಾರಾಧಕರು ಪೌರೋಹಿತ್ಯಕ್ಕೆ ಪರ್ಯಾಯ ಎಂಬಂಥೆ ಕಾರ್ಯನಿರ್ವಹಿಸುವವರು. ಆದರೆ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ ‘ಕಾಂತಾರ’ ಸಿನಿಮಾ ತೆರೆಕಂಡ ನಂತರ ಈ ದೈವ ನರ್ತನ ಸಮುದಾಯದ ಜನರ ಸಮಸ್ಯೆಗಳ ವಿಚಾರವೂ ಮುನ್ನಲೆಗೆ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನಾಗ್ರಹ ಹೆಚ್ಚುತ್ತಿದ್ದಂತೆಯೇ ಸರ್ಕಾರ ಕೂಡಾ ಈ ವಿಚಾರದತ್ತ ಗಮನಹರಿಸಿದೆ.
ಈ ನಡುವೆ, ಅಚ್ಚರಿಯ ನಿರ್ದಾರದಲ್ಲಿ ರಾಜ್ಯ ಸರ್ಕಾರವು, ದೈವ ನರ್ತನ ಮಾಡುವ ಕಲಾವಿದರ ಸಮುದಾಯಕ್ಕೆ ‘ಮಾಸಾಸನ’ ಯೋಜನೆಯನ್ನು ಘೋಷಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ‘ಕರ್ನಾಟಕ ಸಂಸ್ಕೃತಿ,ಆಚರಣೆಗಳ ನೆಲೆಬೀಡು. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯು ಸಹ ಒಂದು. ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನಿಸಿ, 60 ವರ್ಷ ತುಂಬಿದ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ 2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಕರ್ನಾಟಕ ಸಂಸ್ಕೃತಿ,ಆಚರಣೆಗಳ ನೆಲೆಬೀಡು. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯು ಸಹ ಒಂದು.ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನಿಸಿ,60 ವರ್ಷ ತುಂಬಿದ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ 2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದೆ. @BJP4Karnataka pic.twitter.com/svxnkl4zju
— Sunil Kumar Karkala (Modi Ka Parivar) (@karkalasunil) October 20, 2022



















































