ಬೆಂಗಳೂರು: ಹಳೇ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷವನ್ನು ಸಂಘಟನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡುವುದಾಗಿ ಅವರು ಘೋಷಿಸಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ಪೂರ್ವ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ. ಇದಕ್ಕಾಗಿ ವಾಹನಗಳು ಸಹ ಸಿದ್ದಗೊಳ್ಳುತ್ತಿವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಸಂಘಟನೆ ಆರಂಭಿಸಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಏನು ಎಂಬುದನ್ನು ಈ ಕಾರ್ಯಕ್ರಮಗಳ ಮೂಲಕ ತೋರಿಸುತ್ತೇವೆ ಅವರು ಹೇಳಿದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರು ಜೆಡಿಎಸ್ ಪರ ಪ್ರಚಾರಕ್ಕೆ ಬರಲಿದ್ದಾರೆ. ಈ ಬಗ್ಗೆ ಎರಡೂ ಪಕ್ಷಗಳು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಅಕ್ಟೋಬರ್ 8ಕ್ಕೆ ಜನತಾಮಿತ್ರ ಸಮಾರೋಪ ಸಮಾರಂಭ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮದ್ಯಾಹ್ನ 3 ಘಂಟೆಗೆ ಆಯೋಜಿಸಿದ್ದೇವೆ. ಈ ಸಂಬಂಧ ಪೂರ್ವ ಸಿದ್ದತೆಗಾಗಿ ಚರ್ಚೆ ಮಾಡಲು ಬೆಂಗಳೂರು ನಗರ ಘಟಕದ ಪದಾಧಿಕಾರಿಗಳ ಸಭೆ ಕರೆದಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಳೆಯಿಂದಾಗಿ ಜನತಾ ಮಿತ್ರ ಸಮಾರೋಪ ಕಾರ್ಯಕ್ರಮ ಎರಡು ಬಾರಿ ಮುಂದೂಡಿಕೆ ಆಗಿತ್ತು. ಅ.8ರಂದು ಮಧ್ಯಾಹ್ನ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಮುಂದಿನ ಬಿಬಿಎಂಪಿ ಚುನಾವಣಾ ಪ್ರಚಾರದ ಸಮಾವೇಶ ಕೂಡ ಇದೇ ಕಾರ್ಯಕ್ರಮದಿಂದ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದರು.



















































