ಬೆಂಗಳೂರು: ಮುರುಘಾಮಠದ ಶ್ರೀಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬಗ್ಗೆ ಚರ್ಚೆ ಮಾಡದಿರುವುದೇ ಸೂಕ್ತ. ಆದರೆ, ರಾಜ್ಯ ಸರಕಾರ ಜವಾಬ್ದಾರಿಯುತವಾಗಿ ಪ್ರಕರಣವನ್ನ ನಿರ್ವಹಿಸಬೇಕು. ಏನೇನು ತೀರ್ಮಾನ ಮಾಡಬೇಕೋ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರೀತಿಯ ಘಟನೆ ನಡೆಯಬಾರದಿತ್ತು ಎನ್ನುವುದು ನನ್ನ ಅಭಿಪ್ರಾಯ. ಇದು ತುಂಬಾ ಸೂಕ್ಷ್ಮ ವಿಚಾರ. ಮೊದಲೇ ನಮ್ಮ ರಾಜ್ಯ ಭಾವನಾತ್ಮಕ, ಆಚಾರ ವಿಚಾರಗಳಲ್ಲಿ ಬೆಯುತ್ತಿದೆ. ಇಂತಹ ವಿಚಾರಗಳಲ್ಲಿ ನಾವು ಚರ್ಚೆ ಮಾಡದೆ ಇರುವುದೇ ಸೂಕ್ತ. ಸರ್ಕಾರದ ಮಟ್ಟದಲ್ಲಿ ಏನು ತನಿಖೆ ಮಾಡಬೇಕೋ ಮಾಡಲಿ. ತನಿಖೆ ವಿಳಂಬದ ವಿಚಾರ ಸರ್ಕಾರಕ್ಕೆ ಸಂಬಂಧಿಸಿದ್ದು, ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ ಎಂದರು.
ಸಚಿವ ಆನಂದ್ ಸಿಂಗ್ ಬೆದರಿಕೆ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಆತ್ಮಹತ್ಯೆ ಮಾಡಿಕೊಳ್ಳಲು ಹೋದರೆಂದು ಹೇಳಿ ದೂರದಾರರ ಮೇಲೆ ಎಫ್ ಐಆರ್ ದಾಖಲಾಗಿದೆಯೆಂದು ಮಾಧ್ಯಮಗಳಲ್ಲಿ ನೋಡಿದೆ. ಬೆದರಿಕೆ ಹಾಕಿ, ಹೆದರಿಸಿ, ಪ್ರಾಣ ಬೆದರಿಕೆ ಒಡ್ಡಿದವರನ್ನು ಮಂತ್ರಿ ಎಂದು ಬಿಡಲಾಗಿದೆ. ಇದರಿಂದ ಸರ್ಕಾರದ ಆಡಳಿತ ದುರುಪಯೋಗ ಆಗಿದೆ. ಈ ವಿಚಾರನ್ನು ತಿಳಿದುಕೊಂಡು ವಿಧಾನಸನಭೆ ಕಲಾಪದಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.