ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಂಡಿತ ಎಂದು ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಗೆಲುವಿನ ಕಾರ್ಯತಂತ್ರ ಕುರಿತು ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸೂಚನೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಶಿರಸಾವಹಿಸಿ ಪಾಲಿಸಲಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್‍ನಲ್ಲಿ ಇರುವಂತೆ ಸಿಎಂ ಹುದ್ದೆ ವಿಚಾರ, ಇತರ ವಿಚಾರಗಳಲ್ಲಿ ನಮ್ಮಲ್ಲಿ ಭಿನ್ನಮತ ಇಲ್ಲ. ನಾವೆಲ್ಲರೂ ಸಾಮೂಹಿಕವಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದರು.
ಬೆಂಗಳೂರಿನ ನಮ್ಮೆಲ್ಲ ಶಾಸಕರು, ಎಲ್ಲ ಪದಾಧಿಕಾರಿಗಳು ಎರಡು ಗಂಟೆಗಳ ಕಾಲ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗಾಗಲೇ ಕೋರ್ಟ್ ನಿರ್ದೇಶನವೂ ಬಂದಿದೆ. ಮೀಸಲಾತಿ ಪ್ರಕಟಿಸಿ, ಮತದಾರರ ಪಟ್ಟಿ ಅಂತಿಮಗೊಳಿಸುವುದು ಇತ್ಯಾದಿ ಪ್ರಕ್ರಿಯೆ ನಡೆಸಲು ತಿಳಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗೆ ಪಕ್ಷದ ತಯಾರಿ ಸಂಬಂಧ ಸಭೆ ನಡೆಸಲಾಗಿದೆ ಎಂದು ತಿಳಿಸಿದರು. ಅರ್ಹ ಮತದಾರರ ಸೇರ್ಪಡೆ ನಡೆಯಲಿದೆ. ಈ ವಾರದಲ್ಲೇ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುವುದು. ಅಭ್ಯರ್ಥಿಗಳ ಆಯ್ಕೆ ಸಂಬಂಧ ಪ್ರಕ್ರಿಯೆಗಳು ನಡೆಯಲಿವೆ. ಬಿಜೆಪಿ ಪರವಾಗಿ ವಾತಾವರಣ ಇರುವಂತೆ ಮಾಡಲು ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳು ನೀಡಿದ ಸುಮಾರು 8 ಸಾವಿರ ಕೋಟಿ ರೂಪಾಯಿ ಅನುದಾನದ ಕೆಲಸಗಳು ಕೂಡಲೇ ಆರಂಭಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಪ್ರತಿ ಶಾಸಕರು ಹಾಗೂ ನಮ್ಮ ಶಾಸಕರು ಇಲ್ಲದ ಪ್ರದೇಶದಲ್ಲಿ ಸಂಸದರು- ಎಂಎಲ್‍ಸಿಗಳಿಗೆ ಜವಾಬ್ದಾರಿ ಕೊಡಲಾಗುವುದು ಎಂದು ವಿವರಿಸಿದರು. ಇಂದಿನ ಸಭೆಯಲ್ಲಿ ಪ್ರತಿಯೊಬ್ಬ ಶಾಸಕರು, ಅಧ್ಯಕ್ಷರು ಮಾತನಾಡಿದ್ದು, ಗೆಲುವಿನ ಏಕೈಕ ಗುರಿಯನ್ನು ವ್ಯಕ್ತಪಡಿಸಿದ್ದಾಗಿ ತಿಳಿಸಿದರು.
ಆಪ್, ಎಸ್‍ಡಿಪಿಐ, ಕೆಎಫ್‍ಡಿ, ಕೆಆರ್‍ಎಸ್ ಪಕ್ಷಗಳನ್ನು ಎದುರಿಸುವ ಬಗ್ಗೆ ಹಾಗೂ ಬಿಜೆಪಿ ಗೆದ್ದು ಅಧಿಕಾರ ಪಡೆಯುವ ಕುರಿತಂತೆ ಚರ್ಚೆ ನಡೆದಿದೆ. ಅಧಿಕಾರಿಗಳು ಮೀಸಲಾತಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳು ಈ ಕುರಿತು ನಿರ್ಧರಿಸಲಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಚುನಾವಣೆ ಎಂಬುದು ಒಂದು ಯುದ್ಧದಂತೆ. ಆ ಯುದ್ಧ ಗೆಲ್ಲಲು ಚುನಾವಣೆ ಪ್ರಕಟವಾದ ಕೂಡಲೇ ಪೂರ್ವತಯಾರಿ ಮಾಡಿಕೊಳ್ಳಬೇಕಾಗುತ್ತದೆ. ನಮ್ಮದೇ ಸರಕಾರ- ನಮ್ಮ ಮುಖ್ಯಮಂತ್ರಿ, ನಮ್ಮದೇ ಆದ ಬದ್ಧತೆಯ ಕೇಡರ್ ಇರುವುದು ನಮಗೆ ಪ್ಲಸ್ ಪಾಯಿಂಟ್. ಈ ಥರದ ಕೇಡರ್ ಬೇರೆ ಯಾವ ಪಕ್ಷಕ್ಕೂ ಇಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಆಮ್ ಆದ್ಮಿ ಪಕ್ಷ ಉತ್ತರ ಭಾರತದಲ್ಲಿ ಪ್ರಭಾವ ಬೀರಬಹುದು. ದಕ್ಷಿಣ ಭಾರತದಲ್ಲಿ ಒಂದೇ ಒಂದು ಪಾಲಿಕೆ ಸೀಟನ್ನೂ ಗೆಲ್ಲಲಾಗದು ಎಂದು ತಿಳಿಸಿದರು.
ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಕುರಿತು ಸಿಎಂ ಜೊತೆ ಮಾತನಾಡುವುದಾಗಿ ತಿಳಿಸಿದರು. ಇದರ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆಯಬೇಕಿದೆ. ಕೇಂದ್ರ ಸರಕಾರವು ತೀರ್ಮಾನ ಕೈಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯದ ವಸತಿ ಸಚಿವ ವಿ ಸೋಮಣ್ಣ ಸೇರಿದಂತೆ ಪಕ್ಷದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.







































































