ಬೆಂಗಳೂರು: ಜಿಎಸ್ ಟಿ ಮೂಲಕ ಕೇಂದ್ರ ಸರಕಾರವು ಬಡವರನ್ನು ದೋಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಎಸ್ ಟಿ ಜನ ವಿರೋಧಿ ತೆರಿಗೆ ನೀತಿ. ಪೆಟ್ರೋಲ್ ಬೆಲೆ, ದಿನ ನಿತ್ಯದ ವಸ್ತು ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈಗ ಆಹಾರ ಪದಾರ್ಥಗಳಿಗೆ ಜಿಎಸ್ ಟಿ ವಿಧಿಸಿ ಬಡವರ ಅನ್ನವನ್ನೂ ಕಸಿದುಕೊಳ್ಳಲಾಗುತ್ತಿದೆ. ಅಚ್ಛೇದಿನ್ ಎಂದರೆ ಇದೇನಾ? ಇವು ಜನ ವಿರೋಧಿ ಸರಕಾರಗಳು ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾಲು, ಮೊಸರು, ಉಪ್ಪಿನಕಾಯಿ ಮೇಲೆ ತೆರಿಗೆ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದಕ್ಕೂ ಒಂದು ಮಿತಿ ಬೇಡವೇ? ಇದು ಜನ ವಿರೋಧಿ ನಿರ್ಧಾರ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ನಿಂದಾಗಿ ಆನೇಕ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಮೇಲೆ ಜಿಎಸ್ ಟಿ ಹೊರೆ ಹಾಕಲಾಗುತ್ತಿದೆ. ಜಿಎಸ್ ಟಿಯನ್ನು ನಾನು ಮೊದಲೇ ವಿರೋಧ ಮಾಡಿದ್ದೆ. ರಾಜ್ಯಗಳು ಕೇಂದ್ರಕ್ಕೆ ಹಗ್ಗ ಕೊಟ್ಟು ಕುತ್ತಿಗೆ ಕೊಟ್ಟಿವೆ ಅಂತ ಹೇಳಿದ್ದೆ. ಈ ನೀತಿಯನ್ನು ಮರು ಪರಿಶೀಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಜಿಎಸ್ ಟಿ ಹೆಚ್ಚಳ ಬಡವರ ಮೇಲೆ ಮಾರಕ ಪ್ರಭಾವ ಬೀರುತ್ತದೆ. ನೇರವಾಗಿ ಬಡವರ ಮೇಲೆ ಹೊರೆ ಆಗುತ್ತದೆ. ಆದರೆ, ಬಿಜೆಪಿ ಜಿಎಸ್ ಟಿಯನ್ನು ಸಮರ್ಥನೆ ಮಾಡುತ್ತಿದೆ. ನೂರು ಸುಳ್ಳು ಹೇಳಿ ಅದನ್ನೇ ಸತ್ಯ ಮಾಡುವುದು ಅವರ ಹುಟ್ಟುಗುಣ. ಎಂಟು ವರ್ಷದಿಂದ ಎಲ್ಲಿ ಒಳ್ಳೆ ದಿನಗಳು ಬಂದಿವೆ? ಡಾಲರ್ ಎದುರು ರೂಪಾಯಿ ಕಥೆ ಏನಾಗಿದೆ? ವಿದೇಶಿ ವಿನಿಮಯ ಕೂಡ ಖಾಲಿ ಆಗುತ್ತಿದೆ. ಕೇಂದ್ರ ಸರ್ಕಾರದ ನೀತಿಯಿಂದ ವಿದೇಶಿ ಕಂಪನಿಗಳು ಬಂಡವಾಳ ವಾಪಸ್ ಪಡೆಯುತ್ತಿವೆ. ಇದರ ಬಗ್ಗೆ ಚರ್ಚೆ ಮಾಡಬೇಕು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಕಾರ್ಯಕ್ರಮ ಬೇಡ ಎನ್ನುತ್ತಿದ್ದಾರೆ. ಈ ದೇಶದಲ್ಲಿ 1.7 ಮಿಲಿಯನ್ ಜನರು ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಶ್ರೀಲಂಕಾಗಿಂತ ನಮ್ಮ ಸ್ಥಿತಿ ಭಿನ್ನವೇನಿಲ್ಲ. ನಮ್ಮ ರಾಷ್ಟ್ರದಲ್ಲಿ ಬಡತನ ಹೆಚ್ಚುತ್ತಿದೆ. ಬಡತನ ರೇಖೆಗಿಂತ ಕೆಳಗೆ ಇರುವ ಜನರನ್ನು ಆರ್ಥಿಕವಾಗಿ ಬಲಗೊಳಿಸಲು ಸರ್ಕಾರ ಕೆಲಸ ಮಾಡಬೇಕು. ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ ಎಂದು ಹೇಳಿದರು.




















































