ಬೆಂಗಳೂರು: 2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಮತ್ತು 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಇದರಲ್ಲಿ ಪ್ರಕೋಷ್ಠಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಚಾಲಕ ಭಾನುಪ್ರಕಾಶ್ ತಿಳಿಸಿದ್ದಾರೆ.
ಜಕ್ಕೂರಿನ ವಿದ್ಯಾಶಿಲ್ಪಿ ಆವರಣದಲ್ಲಿ ಇಂದು ನಡೆದ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಂಚಾಲಕರು, ಸಹ ಸಂಚಾಲಕರು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು, ಸಂಕುಲನ ಪ್ರಮುಖರು ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಬಿಜೆಪಿ ಬೆಳೆದುಬಂದ ದಾರಿಯ ಬಗ್ಗೆ ವಿವರಿಸಿದರು. ಚುನಾವಣಾ ಅವಧಿಯಲ್ಲಿ ಪ್ರಕೋಷ್ಠಗಳ ಪದಾಧಿಕಾರಿಗಳು ಮತ್ತು ಸದಸ್ಯರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೋವಿಡ್ ಲಸಿಕೆ ನೀಡಿಕೆ, ಸೇವಾ ಕಾರ್ಯಗಳನ್ನು ಪಕ್ಷ ಹಮ್ಮಿಕೊಂಡಿತ್ತು. ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಪ್ರಯೋಜನ ಲಭಿಸಲು ಪಕ್ಷ ಶ್ರಮಿಸಿದೆ. ಇವೆಲ್ಲವುಗಳು ಪಕ್ಷದ ಮತಗಳಾಗಿ ಪರಿವರ್ತನೆ ಹೊಂದುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಪಕ್ಷ ಬೆಳೆಯುತ್ತ ಸಾಗಿದಂತೆ ಮೋರ್ಚಾಗಳನ್ನು ರಚಿಸಲಾಯಿತು. ಬಳಿಕ ಪ್ರಕೋಷ್ಠಗಳ ಮೂಲಕ ಪಕ್ಷ ವಿಸ್ತರಣೆ ಹೊಂದಿದೆ. ಇದೀಗ ಜಿಲ್ಲೆಗಳಿಗೆ ಪ್ರಕೋಷ್ಠಗಳ ಸಂಯೋಜಕರನ್ನು ನೇಮಿಸಲಾಗಿದೆ. ಪಕ್ಷವು ಸದೃಢವಾಗಿ ಬೆಳೆಯಲು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಜನಸಂಘವು 1951ರಿಂದ ಪ್ರಾರಂಭಗೊಂಡು 1980ರಲ್ಲಿ ಭಾರತೀಯ ಜನತಾ ಪಾರ್ಟಿಯಾಗಿ ಮರುರೂಪುಗೊಂಡಿತು. ಬಿಜೆಪಿ ಬೆಳೆಯುತ್ತ ಸಾಗಿದ್ದು, ಇವತ್ತು ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ನುಡಿದರು.
ಪಕ್ಷವು ಕೇಂದ್ರ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಅದು ಸರಕಾರವನ್ನು ರಚಿಸಿದೆ. ಪಕ್ಷವು ಗುಣಾತ್ಮಕ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು. ಸಮರ್ಥರ ಆಯ್ಕೆ (ಪಿಕಪ್), ಪ್ರಶಿಕ್ಷಣ ನೀಡುವುದು, ಆದ್ಯತೆ ಕೊಡುವುದು ಮತ್ತು ಅವರನ್ನು ಮುಂದಿನ ದಿನಗಳಲ್ಲಿ ಪಕ್ಷದ ಉನ್ನತ ಹುದ್ದೆಗೆ ಆಯ್ಕೆ ಮಾಡಲಾಗುವುದು. ಎಲ್.ಕೆ. ಅಡ್ವಾಣಿ ಅವರು ಈ ರೀತಿ ಬೆಳೆಸಿದ್ದರಿಂದ ನರೇಂದ್ರ ಮೋದಿಜಿ ಅವರು ಇಂದು ದೇಶದ ಪ್ರಧಾನಿಯಾಗಿದ್ದು, ಅದೇ ರೀತಿ ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಅನೇಕ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕೋಷ್ಠಗಳ ಸಹ ಸಂಚಾಲಕ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಶಿವಯೋಗಿ ಸ್ವಾಮಿ, ಸಹ ಸಂಚಾಲಕ ಜಯತೀರ್ಥ ಕಟ್ಟಿ, ಶಾಸಕರು ಮತ್ತು ವಿವಿಧ ಪ್ರಕೋಷ್ಠಗಳ ಸಂಚಾಲಕರಾದ ಸಂಜೀವ ಮಠಂದೂರು, ಬಸವರಾಜ ಮತ್ತಿಮೋಡ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


















































