PSI ನೇಮಕಾತಿ ಅಕ್ರಮದಲ್ಲಿ ಕಿಂಗ್ಪಿನ್ಗಳು ಇನ್ನೂ ಬಂಧನವಾಗಿಲ್ಲ ಎನ್ನುತ್ತಿರುವ ಹೆಚ್ಡಿಕೆ.. ಈ ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಸಹಿತ ಪ್ರಭಾವಿಗಳ ಕೈವಾಡ ಇದೆ ಎಂದು ಸಿದ್ದರಾಮಯ್ಯ ಆರೋಪ.. ಈ ಪ್ರಭಾವಿಗಳನ್ನು ಸಿಎಂ ರಕ್ಷಿಸುತ್ತಿದ್ದಾರೆ ಎಂದೂ ವಿಪಕ್ಷ ನಾಯಕರ ಆಕ್ರೋಶ..
ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸುಮಾರು 50 ಮಂದಿ ಈಗಾಗಲೇ ಬಂಧನವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈಗಿನ್ನೂ ಅಕ್ರಮದ ಕಿಂಗ್ಪಿನ್ಗಳ ಬಂಧನವಾಗಿಲ್ಲ, ಅವರನ್ನು ಕೂಡಲೇ ಬಂಧಿಸಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಇದೇ ವೇಳೆ ಸಚಿವ ಅಶ್ವತ್ಥನಾರಾಯಣ್ ಸಹಿತ ಸರ್ಕಾರದಲ್ಲಿ ಭಾಗಿಯಾಗಿರುವ ಇನ್ನಷ್ಟು ಪ್ರಭಾವಿಗಳು ಭಾಗಿಯಾಗಿದ್ದಾರೆಂಬ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿವೆ.
ಈ ನಡುವೆ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ನಡೆಸಿದ ಸುದ್ದುಗೋಷ್ಠಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಪಿಎಸ್ಐ ನೇಮಕ ಹಗರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಹಾಗೂ ಸಚಿವ ಅಶ್ವತ್ಥನಾರಾಯಣ ಅವರ ಹೆಸರೂ ಇದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ವಿಜಯೇಂದ್ರ ಅವರ ಪಾತ್ರವೂ ಇದೆ ಎಂಬ ಆರೋಪ ಕೇಳಿ ಬಂದಿದ್ದು, ವಿಧಾನಸಭೆಯಲ್ಲೇ ಅವರ ಹೆಸರು ಹೇಳಿದ್ದೆ ಎಂದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇವರೆಲ್ಲರಿಗೂ ರಕ್ಷಣೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಅಕ್ರಮದಲ್ಲಿನ ದೊಡ್ಡವರು, ಮಂತ್ರಿಗಳಿದ್ದಾರೆ. ಹೀಗಾಗಿ ಸಿಐಡಿಯಿಂದ ನ್ಯಾಯ ಸಿಗುವುದಿಲ್ಲವೆಂದು ಹೇಳಿದ್ದೆ ಎಂದ ಸಿದ್ದರಾಮಯ್ಯ, ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ಮಾಡಿ ಎಂದು ಸಿಎಂಗೆ ಪತ್ರ ಬರೆದಿದ್ದೆ. ಆಗ ಮಾತ್ರ ಸತ್ಯ ಹೊರಬರಲು ಸಾಧ್ಯವಾಗುತ್ತದೆ ಎಂದು ಪುನರುಚ್ಛರಿಸಿದರು.







































































