ಬೆಂಗಳೂರು: ಮುಂಬರುವ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಿಲುವಿನ ಬಗ್ಗೆ ತಿಳಿಸಿದರು. ಪಕ್ಷ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುವುದೇ ಎಂಬ ಪ್ರಶ್ನೆಗೆ, ‘ ರಾಹುಲ್ ಗಾಂಧಿ ಹಾಗೂ ಪಕ್ಷದ ವರಿಷ್ಠರು ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದು ತೀರ್ಮಾನಿಸಿದ್ದಾರೆ’ ಎಂದರು.
ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಸಂಧಾನ ಮಾಡಲಾಯಿತೇ ಎಂಬ ಪ್ರಶ್ನೆಗೆ, ‘ ನಾನು ಮಂತ್ರಿ ಸ್ಥಾನ ಸಿಗದಿದ್ದಾಗಲೆ ಉಸಿರು ಎತ್ತಲಿಲ್ಲ. ಅಸಮಾಧಾನ ಹೊರಹಾಕಲಿಲ್ಲ. ದೇವೇಗೌಡರ ವಿರುದ್ಧ ಹೆಣ್ಣುಮಗಳನ್ನು ನಿಲ್ಲಿಸಿ ಸೋಲಿಸಿದೆ ಎಂದು ಧರ್ಮ ಸಿಂಗ್ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ. ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಸುಮ್ಮನಿದ್ದೆ. ನಾವು ಸಿದ್ದರಾಮಯ್ಯ ಅವರ ಪರವಾಗಿಯೂ ಹೋರಾಟ ಮಾಡಿದೆವು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಾಗಲೂ ಮಾತನಾಡಲಿಲ್ಲ. ನಂತರ ಸೋನಿಯಾ ಗಾಂಧಿ ಅವರು ಹೇಳಿ ಸಂಪುಟದಲ್ಲಿ ಸ್ಥಾನ ಸಿಕ್ಕಿತು. ನಾನು ಅವರ ನಾಯಕತ್ವದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಬೇಕು ಎಂದು ಬೆಂಬಲಿಸಿದ್ದೇವು. ನಾವು ಅಧಿಕಾರ ಕಳೆದುಕೊಂಡ ನಂತರ ನಾನು ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರೇ ಶಾಸಕಾಂಗ ಪಕ್ಷದ ನಾಯಕರಾಗಬೇಕು ಎಂದು ಹೇಳಿದೆವು. ನಾನು ಯಾವತ್ತೂ ಪಕ್ಷದ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲ. ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಪಕ್ಷ ಇದ್ದರೆ ಮಾತ್ರ ನಾವು. ಇದನ್ನೇ ನಾನು ಮೊದಲಿಂದಲೂ ಪ್ರತಿಪಾದಿಸುತ್ತಿದ್ದೇನೆ. ಎಲ್ಲಾ ಕಾರ್ಯಕರ್ತರಿಗೂ ಇದನ್ನೇ ಹೇಳುತ್ತಿದ್ದೇನೆ ‘ ಎಂದರು.
ಸಿದ್ದರಾಮೋತ್ಸವ ಕಾರ್ಯಕ್ರಮದ ನಂತರ ಕಾಂಗ್ರೆಸ್ ಖಾಲಿ ಆಗುತ್ತೆ ಎಂಬ ಬಿಜೆಪಿ ಟ್ವೀಟ್ ಕುರಿತು ಕೇಳಿದ ಪ್ರಶ್ನೆಗೆ, ‘ ಬೇರೆಯವರು ಏನಾದರೂ ಹೇಳಲಿ. ನಮ್ಮ ಪಕ್ಷದ ನಾಯಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಿತ್ತು, ನಾನು ಕೇದಾರನಾಥಕ್ಕೆ ಹೋಗಿ ಕುಟುಂಬ ಸಮೇತ ಆಚರಿಸಿಕೊಂಡೆ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಇಲ್ಲಿ ಈ ರೀತಿ ಆಚರಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ. 75ನೇ ಸ್ವಾತಂತ್ರ್ಯ ದಿನ ಆಚರಿಸಲು ಪಕ್ಷ ತೀರ್ಮಾನಿಸಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ’ ಎಂದರು.
ಇದು ಶಕ್ತಿ ಪ್ರದರ್ಶನ ಅಲ್ಲವೇ ಎಂದು ಕೇಳಿದ ಪ್ರಶ್ನೆಗೆ, ‘ ನಮ್ಮ ಪಕ್ಷಕ್ಕೆ ಏನೆಲ್ಲಾ ಅನುಕೂಲವಾಗುತ್ತದೆಯೋ ಅದನ್ನೆಲ್ಲ ಮಾಡೋಣ. ಇನ್ನು ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ, ಆ ಕಾರ್ಯಕ್ರಮ ಮಾಡಬೇಕು ಎಂದು ಅವರ ಅಭಿಮಾನಿಗಳು ಕೇಳುತ್ತಾರೆ. ಪರಮೇಶ್ವರ್ ಅವರ ಅಭಿಮಾನಿಗಳು ಬಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಬೇಕು ಎಂದು ಕೇಳುತ್ತಾರೆ. ನಾನು ನನ್ನ ಹುಟ್ಟುಹಬ್ಬಕ್ಕೆ ಯಾವುದೇ ಆಚರಣೆ, ಪ್ರಚಾರ ಬೇಡ ಎಂದಿದ್ದೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಏನೇ ಸಂಘಟನೆ ಆದರೂ ಅದರಿಂದ ಪಕ್ಷಕ್ಕೆ ಒಳ್ಳೆಯದಾದರೆ ಸಾಕು ‘ ಎಂದು ತಿಳಿಸಿದರು.
ಈ ಕಾರ್ಯಕ್ರಮ ಪಕ್ಷದ ವೇದಿಕೆಯಲ್ಲಿ ನಡೆಯುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ‘ ಈ ಕಾರ್ಯಕ್ರಮಕ್ಕೆ ಒಂದು ಸಮಿತಿ ರಚಿಸಿಕೊಂಡಿದ್ದು, ಸಿದ್ದರಾಮಯ್ಯ ಅವರು 3ನೇ ತಾರೀಕು ಕಾರ್ಯಕ್ರಮ ಮಾಡುತ್ತಿದ್ದಾರೆ ನೀನು ಇರಬೇಕು ಎಂದು ಕರೆದಿದ್ದಾರೆ. ನಾನು ಆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ರಾಹುಲ್ ಗಾಂಧಿ ಅವರ ಆಗಮನದ ಬಗ್ಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಆಹ್ವಾನ ನೀಡಿರಬಹುದು. ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ’ ಎಂದರು.
ಮುಂದೆ ಜಾತಿ ಸಮಾವೇಶಗಳನ್ನು ಮಾಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಎಲ್ಲಾ ಸಮಾಜದವರು ಮಾಡಲು ಮುಂದಾಗಿದ್ದಾರೆ. ನಮ್ಮ ಸಮಾಜದ್ದೂ ಆಗಿದೆ. ಬೇರೆ ಸಮಾಜದ್ದೂ ಆಗಿವೆ. ಮಡಿವಾಳರ ಸಮಾಜದ ಸಮಾವೇಶವು ಆಗಿದೆ. ಚುನಾವಣೆಗೂ ಮುನ್ನ ಅವರು ತಮ್ಮ ಬೇಡಿಕೆ ಮುಂದಿಡುವುದರಲ್ಲಿ ತಪ್ಪೇನಿಲ್ಲ ‘ ಎಂದರು.





















































