ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ನೀಡಿದ್ದಾರೆನ್ನಲಾದ ಅವಹೇಳನಾಕಾರಿ ಹೇಳಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದರು. ಮಧುಗಿರಿ ಪಟ್ಟಣದ ಎನ್.ಹುಚ್ಚಮಾಸ್ತಿಗೌಡ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಪ್ರತಿಕೃತಿ ದಹನ ಮಾಡಿದರು.
ಮಧುಗಿರಿ ಪಟ್ಟಣದ ಪ್ರವಾಸಿ ಮಂದಿರದಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ಮೂಲಕ ನೂರಾರು ಜೆಡಿಎಸ್ ಕಾರ್ಯಕರ್ತರು, ಮಾಜಿ ಶಾಸಕ ಕೆ ಎನ್ ರಾಜಣ್ಣ ವಿರುದ್ಧ ಶಕ್ತಿಪ್ರದರ್ಶನ ಮಾಡಿದರು.
ಶಾಸಕರಾದ ವೀರಭದ್ರಯ್ಯ, ಜೆಡಿಎಸ್ ನಾಯಕರಾದ ಆರ್.ಸಿ ಅಂಜನಪ್ಪನವರು, ನರಸೇಗೌಡರು ಹಾಗೂ ಜೆಡಿಎಸ್ ಮಹಿಳಾ ಮುಖಂಡರಾದ ಲಕ್ಷ್ಮಕ್ಕ ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ ರಾಜಣ್ಣರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ, ಅವರನ್ನು ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸಿದರು.





















































