ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಯಸ್ಸಿಗಾಗಿ ತೀರ್ಥಹಳ್ಳಿ ಹುಡುಗರ ವಿಶೇಷ ಕೈಂಕರ್ಯ ಕೈಗೊಂಡು ಎಲ್ಲರ ಗಮನಸೆಳೆದಿದ್ದಾರೆ.
ತೀರ್ಥಹಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಡೆಸ ವಿಕಾಸ ತೀರ್ಥ ಬೃಹತ್ ಬೈಕ್ ರ್ಯಾಲಿಯಲ್ಲಿ 1,000ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾದರು. ಮೋದಿ ಸರ್ಕಾರದ ಒಳಿತಿಗಾಗಿ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ಈ ರಾಲಿಯಲ್ಲಿ ಬುಲೆಟ್ ಗಾಡಿ ಓಡಿಸಿದ ಗೃಹ ಸಚಿವರು ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ಮಂಗಳವಾರ ತೀರ್ಥಹಳ್ಳಿ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಯೋಜನೆಗಳನ್ನು ಜನತೆಗೆ ತಲುಪಿಸಬೇಕೆಂಬ ಆಶಯದೊಂದಿಗೆ ‘ವಿಕಾಸ ತೀರ್ಥ’ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು, 5 ಮಹಾಶಕ್ತಿ ಕೇಂದ್ರಗಳ ಪಕ್ಷದ ಕಾರ್ಯಕರ್ತರು ಆಗುಂಬೆ, ಆರಗ, ಕುಪ್ಪಳ್ಳಿ, ಮಂಡಗದ್ದೆ, ತೀರ್ಥಹಳ್ಳಿ ಪಟ್ಟಣ ಮಹಾಶಕ್ತಿ ಕೇಂದ್ರಗಳಿಂದ ಹೊರಟು ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಬಂದು ತಲುಪಿ, ಶ್ರೀ ದೇವರಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ತೀರ್ಥಹಳ್ಳಿ ಪಟ್ಟಣದಾದ್ಯಂತ ಬೈಕ್ ರ್ಯಾಲಿ ಆರಂಭವಾಯಿತು.
ಗೃಹಸಚಿವ ಆರಗ ಜ್ಞಾನೇಂದ್ರ ಅವರು ಸ್ವತಃ ಬೈಕ್ ಏರಿ ರ಼್ಯಾಲಿಯಲ್ಲಿ ಮುಂಚೂಣಿಯಿಂದ ಭಾಗವಹಿಸಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೆಘರಾಜ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ , ಮಂಡಲ ಅಧ್ಯಕ್ಷ ಬಾಳೆಬೈಲು ರಾಘವೇಂದ್ರ, ಮುಖಂಡರಾದ ಮದನ್, ಮಂಡಲ ಯುವಮೋರ್ಚಾ ಅಧ್ಯಕ್ಷರು, ವಿಕಾಸ ತೀರ್ಥ ಬೈಕ್ ರ್ಯಾಲಿ ತಾಲೂಕು ಸಂಚಾಲಕ ಜಿ.ಕೆ.ಸಂದೀಪ್ ಭಟ್ , ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನದ ಮಂಡಲ ಸಂಚಾಲಕ ಕುಕ್ಕೆ ಪ್ರಶಾಂತ್, ಸಹ ಸಂಚಾಲಕ ರಕ್ಷಿತ್ ಮೇಗರವಳ್ಳಿ ಸೇರಿದಂತೆ ತೀರ್ಥಹಳ್ಳಿ ಮಂಡಲದ ಎಲ್ಲಾ ಮಹಾಶಕ್ತಿಕೇಂದ್ರಗಳ ಪ್ರಮುಖರು, ಪದಾಧಿಕಾರಿಗಳು, ಬೈಕ್ ರ಼್ಯಾಲಿ ಯಲ್ಲಿ ಭಾಗಿಯಾದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬೈಕ್ ಗಳು ಇಂದಿನ ರ಼್ಯಾಲಿಯಲ್ಲಿ ಭಾಗವಹಿಸಿ, ಪಟ್ಟಣದಾದ್ಯಂತ ಸಂಚರಿಸಿ ಮೋದಿ ಸರ್ಕಾರದ ಸೇವೆಯ ಬಗ್ಗೆ, ಜಯಘೋಷ ಮೊಳಗಿಸಿದರು.
ನಂತರ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಖ್ಯಾತ ಅಂಕಣಕಾರರೂ , ಯುವ ವಾಗ್ಮಿಗಳೂ ಆದ ಕಾರ್ಕಳದ ಆದರ್ಶ ಗೋಖಲೆ ಅವರು ಯುವಕರನ್ನುದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ ಎಂಟು ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಂದ್ರದ ಜನಪರ ಯೋಜನೆಗಳು ಹಾಗೂ ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಮೋದಿಯವರ ಆದರ್ಶ ಆಡಳಿತದ ಕುರಿತು, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಕರ ಪಾತ್ರದ ಕುರಿತು ಮಾತನಾಡಿದರು.


















































