ಉಡುಪಿ : ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ದೇಶದ ಜನರ ಆಶಾಕಿರಣ. ಕಳೆದ 8 ವರ್ಷದಲ್ಲಿ ನರೇಂದ್ರ ಮೋದಿಯವರು ಸಮರ್ಥ, ಭರವಸೆಯ ನಾಯಕರಾಗಿ ಭಾರತದ ಅಭಿವೃದ್ಧಿಯ ಪರ್ವಕ್ಕೆ ನಾಂದಿ ಹಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ 8ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ದೇಶದ ಪ್ರಗತಿಗೆ ರಾಜಕೀಯ ಸ್ಥಿರತೆಯನ್ನು ತಂದ ಮುತ್ಸದ್ದಿ ನಾಯಕ. ರಾಜಕೀಯ ಸ್ಥಿರತೆಯ ಜೊತೆಗೆ ಭಾರತ ದೇಶದ ಸಮಗ್ರ ಅಭಿವೃದ್ಧಿಯ ಯಶೋಗಾಥೆಯ ನೇತೃತ್ವವನ್ನು ಮೋದಿಯವರು ಅತ್ಯಂತ ಸಮರ್ಥವಾಗಿ ವಹಿಸಿದ್ದಾರೆ. ದಿಟ್ಟ ನಿರ್ಧಾರಗಳ ದೂರದೃಷ್ಟಿಯ ಪ್ರತೀಕವಾದ ಪ್ರಧಾನಿ ಮೋದಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾವಲಂಬನೆಯ ಸ್ವಾಭಿಮಾನದ ಬದುಕು ನಡೆಸಲು ದಾರಿ ತೋರಿದ ಧೀಮಂತ ಜನನಾಯಕರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜನರಿಗೆ ಮೂಲಭೂತಸೌಕರ್ಯ, ಉತ್ತಮ ಶಿಕ್ಷಣ, ಆತ್ಮನಿರ್ಭರತೆ ಮೂಲಕ ಹೊಸ ಮನ್ವಂತರವನ್ನು ನರೇಂದ್ರ ಮೋದಿಯವರು ಸೃಷ್ಟಿಮಾಡಿದ್ದಾರೆ. ದೇಶಕ್ಕೆ ಹೊಸ ದಿಕ್ಸೂಚಿಯನ್ನು ನೀಡಿದ್ದಾರೆ. ಅವರನಾಯಕತ್ವ ನಿಸ್ವಾರ್ಥ, ಜನರನ್ನು ಸಶಕ್ತ ಮಾಡುವ ಮೂಲಕ ದೇಶವನ್ನು ಸಶಕ್ತ ಮಾಡುತ್ತಿದ್ದಾರೆ. ಮೋದಿಯವರ ಮೇಲೆ, ಅವರ ಕಾರ್ಯಕ್ರಮಗಳ ಮೇಲೆ ಜನರಿಗೆ ಅಚಲವಾದ ವಿಶ್ವಾಸವಿರಿಸಿದ್ದಾರೆ ಎಂದರು.


















































