ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖ ದೇವಾಲಯಗಳಲ್ಲೊಂದಾದ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯನ್ನು ನ್ಯಾಯಾಲಯದ ಆದೇಶಾನುಸಾರ ಪುನರ್ ರಚಿಸುವ ಸಲುವಾಗಿ ಚುನಾವಣೆ ಗುರವಾರ ನಡೆಯಿತು. ಸ್ಪರ್ಧಿಸಿದ ಒಟ್ಟು ಹನ್ನೊಂದು ಅಭ್ಯರ್ಥಿಗಳಲ್ಲಿ ಅಡಿಗೆ ಬಾಲಕೃಷ್ಣ ಶೆಣೈ, ಎಮ್.ಕಿರಣ್ ಪೈ, ಎಮ್.ಸತೀಶ್ ಪ್ರಭು, ಕೆ. ಗಣೇಶ್ ಕಾಮತ್ ಹಾಗು ಎಮ್. ಜಗನ್ನಾಥ್ ಕಾಮತ್ ಮುಂದಿನ ಐದು ವರ್ಷಗಳ ಅವಧಿಗೆ ಶ್ರೀ ದೇವಳದ ಮುಕ್ತೇಸರರಾಗಿ ಆಯ್ಕೆಗೊಂಡರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವ ಹದಿನೆಂಟು ವರ್ಷ ಮೇಲ್ಪಟ್ಟ ಸಮಾಜಬಾಂಧವರಿಗೆ ಮತದಾನದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 8.00ಕ್ಕೆ ಮತದಾನ ಪ್ರಾರಂಭವಾಗಿ ಸಂಜೆ 7.೦೦ಕ್ಕೆ ಮುಕ್ತಾಯಗೊಂಡಿತು.
ಶ್ರೀ ದೇವಳದ ನಿಯೋಜಿತ ಚುನಾವಣಾ ಅಧಿಕಾರಿಯಾಗಿದ್ದ ಖ್ಯಾತ ನ್ಯಾಯವಾದಿಗಳಾದ ನಾಗೇಶ್ ಕುಮಾರ್ ಮತ್ತು ಸಹಾಯಕ ಚುನಾವಣಾ ಅಧಿಕಾರಿಯಾಗಿದ್ದ ಪ್ರೇಮಾನಂದ ಕಿಣಿ ಹಾಗೂ ಸ್ವಯಂಸೇವಕರು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಶುಕ್ರವಾರ ಬೆಳಿಗ್ಗೆ ಮಾಜಿ ಮೊಕ್ತೇಸರರಾದ ಸಿ.ಎಲ್ ಶೆಣೈ, ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ರವರು ತಮ್ಮ ಅಧಿಕಾರ ಹಾಗೂ ದೇವಳದ ಕೀಲಿಗಳನ್ನು ಶ್ರೀ ದೇವರ ಸಮ್ಮುಖದಲ್ಲಿ ಹಸ್ತಾಂತರಿಸಿದ ಸನ್ನಿವೇಶವೂ ಗಮನಸೆಳೆಯಿತು. ಈ ಸಂದರ್ಭದಲ್ಲಿ ಮಾಜಿ ಮೊಕ್ತೇಸರರಾದ ಎಂ.ಪದ್ಮನಾಭ ಪೈ, ಕೊಚ್ಚಿಕಾರ್ ಜಯರಾಜ್ ಪೈ ಉಪಸ್ಥಿತರಿದ್ದರು.