ಬೆಂಗಳೂರು: ಕೋವಿಡ್ ಸಮಯದಲ್ಲಿ ಕರ್ನಾಟಕವು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದ್ದು, ಈವರೆಗೆ ಸುಮಾರು 2.5 ಲಕ್ಷ ಆರೋಗ್ಯ ಸಿಬ್ಬಂದಿಗೆ ತಂತ್ರಜ್ಞಾನದ ಮೂಲಕ ತರಬೇತಿ ನೀಡಲಾಗಿದೆ. ಇದು ಉಳಿದ ರಾಜ್ಯಗಳಿಗೂ ಮಾದರಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸ್ಟೆಪ್ ಒನ್ ಸಂಸ್ಥೆಯ ಸಹಯೋಗದಲ್ಲಿ ಕೋವಿಡ್ ರೋಗಿಗಳ ಮನೆ ಐಸೋಲೇಶನ್ ಗೆ ಸಂಬಂಧಿಸಿದಂತೆ 10,000 ವೈದ್ಯ, ಆಯುಷ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಕೋವಿಡ್ ಮೊದಲ ಅಲೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಹೊಸ ವೈರಾಣು ಕುರಿತು ತರಬೇತಿ ನೀಡಬೇಕಿತ್ತು. ಆದರೆ ಲಾಕ್ ಡೌನ್ ಮೊದಲಾದ ಕಾರಣಗಳಿಂದಾಗಿ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ನೆರವಿನಲ್ಲಿ ತಂತ್ರಜ್ಞಾನ ಬಳಸಿ 2.5 ಲಕ್ಷ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಈ ಬಗೆಯ ಪರಿಣಾಮಕಾರಿ ತಂತ್ರಜ್ಞಾನ ಬಳಕೆಯನ್ನು ಕೇಂದ್ರ ಸರ್ಕಾರ ಕೂಡ ಗುರುತಿಸಿದೆ. 5 ಟಿ ಕ್ರಮವನ್ನು ಕೂಡ ಯಶಸ್ವಿಯಾಗಿ ಜಾರಿ ಮಾಡಲಾಗಿದೆ. ಮೂರನೇ ಅಲೆಯಲ್ಲಿ 2-3 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದರೂ ತೀವ್ರತೆ ಕಡಿಮೆ ಇದೆ. 93% ರೋಗಿಗಳು ಮನೆ ಐಸೋಲೇಶನ್ ನಲ್ಲೇ ಇದ್ದಾರೆ. 5-6% ಜನರು ಆಸ್ಪತ್ರೆ ಹಾಗೂ 1% ಜನರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದಾರೆ ಎಂದರು.
ಸ್ಟೆಪ್ ಒನ್ ಸಂಸ್ಥೆಯು ಕೋವಿಡ್ ಹೋರಾಟದಲ್ಲಿ ಸರ್ಕಾರದೊಂದಿಗೆ ಭಾಗಿಯಾಗಿ ಸಾವಿರಾರು ವೈದ್ಯರೊಂದಿಗೆ ಕೆಲಸ ಮಾಡಿ ಮನೆ ಐಸೋಲೇಶನ್ ಕ್ರಮ ಯಶಸ್ವಿಯಾಗಲು ನೆರವಾಗಿದೆ. ಇದರಿಂದಾಗಿ ರಾಜ್ಯ ದೇಶದಲ್ಲೇ ಮಾದರಿಯಾಗಿದೆ. ನೀತಿ ಆಯೋಗ ಕೂಡ ಹೋಮ್ ಐಸೋಲೇಶನ್ ಹಾಗೂ ಇದಕ್ಕೆ ಸಂಬಂಧಿಸಿದ ತಾಂತ್ರಿಕ ನೆರವುಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆ. ಎಲ್ಲಾ ವೈದ್ಯ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ವೈದ್ಯರು ಹಾಗೂ ವೈದ್ಯಕೀಯ ಕಾಲೇಜುಗಳ ಪ್ರೊಫೆಸರ್ ಗಳ ಸಹಯೋಗದಿಂದಾಗಿ ಮನೆ ಐಸೋಲೇಶನ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿದೆ ಎಂದರು.
ಈ ಸಮಯದಲ್ಲಿ ಹೋಮ್ ಐಸೋಲೇಶನ್ ನಲ್ಲಿರುವವರ ಆರೋಗ್ಯ ಮೇಲೆ ಹೆಚ್ಚು ನಿಗಾ ಇರಿಸಲಾಗಿದೆ. ಇದಕ್ಕಾಗಿ ಸುಮಾರು 10 ಸಾವಿರ ವೈದ್ಯ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಇನ್ನೂ 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸುವ ಉದ್ದೇಶವಿದೆ. 500 ತಜ್ಞ ವೈದ್ಯರು ಈ ವ್ಯವಸ್ಥೆಗೆ ಬೆಂಬಲ ನೀಡುತ್ತಿದ್ದಾರೆ. ಎರಡನೇ ಅಲೆಯಲ್ಲಿ ರೋಗಿಗಳಿಗೆ 1.33 ಕೋಟಿ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಲಾಗಿತ್ತು. 42.57 ಲಕ್ಷ ವೈದ್ಯರ ಕನ್ಸಲ್ಟೇಶನ್ ಮಾಡಲಾಗಿತ್ತು. 36 ಸಾವಿರ ರೋಗಿಗಳಿಗೆ ಮಾನಸಿಕ ಆರೋಗ್ಯ ಕೌನ್ಸಿಲಿಂಗ್ ಮಾಡಲಾಗಿದೆ ಎಂದು ವಿವರಿಸಿದರು.
ಅನೇಕ ರೋಗಿಗಳು ಅಗತ್ಯವಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನು ತಪ್ಪಿಸಿ ಅಗತ್ಯವಿರುವವರಿಗೆ ಹಾಸಿಗೆ ಒದಗಿಸಲು ವೈದ್ಯರ ಸಲಹೆ, ಮಾರ್ಗದರ್ಶನ ಅಗತ್ಯ. ದೂರವಾಣಿ ಕರೆ ಮಾಡಿ ಮಾರ್ಗದರ್ಶನ ನೀಡುವುದರಿಂದ ಅನೇಕರ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದರು.