ಬೆಂಗಳೂರು: ಮಧ್ಯರಾತ್ರಿಯಲ್ಲಿ ಬಂದು ಕನ್ನಡಿಗರ ಹೆಮ್ಮೆಯ ಪುತ್ರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮಾಡಿರುವ, ವಾಹನಗಳ ಮೇಲೆ ಕಲ್ಲು ಹೊಡೆದು ಬೆಂಕಿ ಇಟ್ಟಿರುವ ನಾಡದ್ರೋಹಿಗಳನ್ನು ರಾಜ್ಯದಿಂದ ಗಡೀಪಾರು ಮಾಡಬೇಕು, ಘಟನೆಯಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಧ್ಯರಾತ್ರಿ ಬಂದು ರಾಯಣ್ಣ ಪ್ರತಿಮೆಯನ್ನು ಹಾಳು ಮಾಡಿರುವುದು ಹೇಡಿತನ. ಭಾಷಾ ಸಾಮರಸ್ಯ ಹಾಳು ಮಾಡುವ ಇಂಥ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು ಎಂದರು.
ಸ್ವಾತಂತ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪ ಮಾಡಿರುವುದು ಹೇಯ ಕೃತ್ಯ. ಇದು ವಿಕೃತವಲ್ಲದೇ ಮತ್ತೇನು ಅಲ್ಲ. ಈ ಮೂಲಕ ಕಿಡಿಗೇಡಿಗಳು ಕನ್ನಡಿಗರಿಗೆ ಮಾತ್ರವಲ್ಲ ಮರಾಠಿಗರಿಗೆ ಕೂಡ ದ್ರೋಹ ಎಸಗಿದ್ದಾರೆ. ಓರ್ವ ರಾಷ್ಟ್ರಪ್ರೇಮಿ, ಮಹಾನ್ ಯೋಧನಿಗೆ ಆಗಿರುವ ಈ ಅಪಚಾರದಿಂದ ಎಲ್ಲರೂ ತಲೆತಗ್ಗಿಸುವಂತೆ ಆಗಿದೆ. ಈ ಕೃತ್ಯದಲ್ಲಿ ಯಾವುದೇ ಸಂಘಟನೆಗಳು ಭಾಗಿಯಾಗಿದ್ದರೂ ಅವುಗಳನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಹಾಗೂ ತಪ್ಪಿತಸ್ಥರನ್ನು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.
ಈ ಘಟನೆಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಹೊರಗೆಳೆದು, ಷಡ್ಯಂತ್ರ ನಡೆಸಿದ ಎಲ್ಲರಿಗೂ ತಕ್ಕ ಶಾಸ್ತಿ ಮಾಡಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದು ಅವರು ತಿಳಿಸಿದರು. ಎಂಇಎಸ್ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮೃದು ಧೋರಣೆ ಅನುಸರಿಸುತ್ತಿವೆ ಎಂದು ಜನ ದೂರುತ್ತಿದ್ದಾರಲ್ಲ ಎಂದು ಮಾಧ್ಯಮಗಳು ಗಮನ ಸೆಳೆದಾಗ ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಿಷ್ಟು;
“ಯಾರ ಮೇಲೆ ಯಾರಿಗೆ ಮೃದು ಧೋರಣೆ ಇದೆ ಎನ್ನುವುದಕ್ಕಿಂತ ನಮ್ಮ ನೆಲದಲ್ಲೇ ಇದ್ದು, ಇಲ್ಲಿನ ನೀರು ಗಾಳಿ ಅನ್ನ ಸೇವಿಸುತ್ತಾ ನಮ್ಮ ನಾಡಿನ ಬಗ್ಗೆ ದ್ರೋಹ ಚಿಂತನೆ ಮಾಡುವುದು ಘೋರ ಅಪರಾಧ. ಇದಕ್ಕೆ ಕ್ಷಮೆ ಇಲ್ಲ” ಎಂದರು.