ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಶುಕ್ರವಾರ ಅಚ್ಚರಿಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಉತ್ತರ ಭಾರತದ ಪುಣ್ಯ ತಾಣಗಳಲ್ಲಿ ಸವಾರಿ ಕೈಗೊಂಡು ಗಮನ ಸೆಳೆಯುವ ನಾಗಸಾಧುಗಳ ಸಮೂಹ ಬೆಂಗಳೂರಿನ ವಿವಿಧೆಡೆ ಜನಪರ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಭೇಟಿ ನೀಡಿದ ಪ್ರಸಂಗ ಕುತೂಹಲಕ್ಕೆ ಕಾರಣವಾಯಿತು. ಇದೇ ವೇಳೆ, ನಾಡಿನ ಜನರ ಹಸಿವು ನೀಗಿಸುವ ಮೂಲಕ ಗಮನಸೆಳೆದಿರುವ ChefTalk ಸಂಸ್ಥೆಯ ಕೇಂದ್ರ ಕಚೇರಿಗೆ ಮೂವರು ನಾಗಸಾಧುಗಳ ಗುಂಪು ಭೇಟಿ ನೀಡಿ ಸೇವಾ ನಿರತ ಯುವಜನರಿಗೆ ಆಶೀರ್ವಾದ ನೀಡಿದೆ.
ಕರ್ನಾಟಕ ಮೂಲದ ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಮಹಾರಾಜ್ ಜಿ (ನಾಗಾಸಾಧು ತಪೋನಿಧಿ ಆನಂದ್ ಅಖಾಡ), ಅಷ್ಟ ಕೌಶಲ್ ಮಹಂತ್ ಬಾಬಾ ಶ್ರೀ ರಾಹುಲ್ ಗಿರಿ ಮಹಾರಾಜ್ ಜಿ (ನಾಗಾಸಾಧು ಆಹ್ವಾಹನ್ ಅಖಾಡ), ಬಾಬಾ ಶ್ರೀ ಬಿಶಂಬರ್ ಭಾರತಿ ಜಿ (ನಾಗಾಸಾಧು ಜೂನ ಅಖಾಡ) ಈ ನಾಗಸಾಧುಗಳು ಸಾಮಾಜಿಕ ಕಾರ್ಯಕರ್ತ ಡಾ.ಗೋವಿಂದ ಬಾಬು ಪೂಜಾರಿ ಮಾಲೀಕತ್ವದ ChefTalk ಕಂಪನಿ ಕಚೇರಿಗೆ ಭೇಟಿ ನೀಡಿತು. ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ, ಸಾವಿರಾರು ಮಂದಿಗೆ ಶಿಕ್ಷಣ, ವೈದ್ಯಕೀಯ, ಆಶ್ರಯ ನೆರವು ನೀಡಿರುವ ಡಾ.ಗೋವಿಂದ ಬಾಬು ಪೂಜಾರಿ ಅವರ ಸೇವೆಯನ್ನು ಕೊಂಡಾಡಿದ ಈ ಸಾಧುಗಳು ಇವರ ಪುಣ್ಯಕಾರ್ಯಕ್ಕೆ ಶ್ರೇಯಸ್ಸು ಲಭಿಸಲಿ ಎಂದು ಆಶಿಸಿದರು.
ಉತ್ತರ ಭಾರತ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಪ್ರಭಾವಿ ಹಿಂದೂ ಸಂಘಟನೆಯಾಗಿರುವ ‘ಭೈರವ್ ಸೇನೆ’ಯ ರಾಷ್ಟ್ರೀಯ ಗೌರವಾಧ್ಯಕ್ಷರಾಗಿ ಇತ್ತೀಚೆಗಷ್ಟೇ ಆಯ್ಕೆಯಗಿರುವ ಕರ್ನಾಟಕ ಮೂಲದ ನಾಗಾಸಾಧು, ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಜಿ ಮಹಾರಾಜ್ ಮೂಲತಃ ಕರ್ನಾಟಕದವರು. ಇವರು ಮುಂದಿನ ವಾರದಿಂದ ಕರುನಾಡಿನಲ್ಲಿ ಯಾತ್ರೆ ಕೈಗೊಂಡಿದ್ದು ಅವರಿಗೆ ಇತರ ನಾಗಸಾಧುಗಳೂ ಸಾಥ್ ನೀಡಿದ್ದಾರೆ.
ಇವರ ಮೂಲ ಹೆಸರು ವಿಠಲ್. ದಕ್ಷಿಣ ಕನ್ನಡ ಮೂಲದ ಇವರು ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ಹಿಂದೂ ಸಂಘಟನೆಗಳನ್ನು ಕಟ್ಟಿದವರು. ಸಂಘಟನೆಯ ಕೆಲಸಕ್ಕೆ ಮೀಸಲಿಟ್ಟ ಅವಧಿ ಕ್ರಮಿಸಿದ ನಂತರ, ಕೆಲವು ವರ್ಷಗಳ ಹಿಂದೆ ಹಿರಿಯ ಸಂತ, ಶ್ರೀ ಪರಮಹಂಸ ಬಾಬಾ ಬಣ್ಖಂಡಿ ಜಿ ಮಹಾರಾಜ್ ಅವರ ಶಿಷ್ಯರಾಗಿ ದೀಕ್ಷೆ ಪಡೆದರು. ನಂತರ ವಿಠ್ಠಲ್‌ಗಿರಿ ಮಹಾರಾಜ್ ಅವರು ಉತ್ತರಖಂಡ್‌ನ ಪುಣ್ಯಕ್ಷೇತ್ರಗಳ ಆಶ್ರಮಗಳಲ್ಲಿ ತಪೋನಿರತರಾಗಿದ್ದಾರೆ. ಮೋದಿ, ಸುಷ್ಮಾ, ಜೇಟ್ಲಿ ಸಹಿತ ಹಿರಿಯ ನಾಯಕರ ಗುರು ಎಂದೇ ಪರಮಹಂಸ ಬಾಬಾ ಬಣ್ಖಂಡಿ ಜಿ ಮಹಾರಾಜ್ ಗುರುತಿಸಿಕೊಂಡವರು. ಅವರ ಪ್ರೇರಣೆಯಂತೆ ಇದೀಗ ಈ ನಾಗಸಾಧುಗಳು ದಕ್ಷಿಣ ಭಾರತ ಪರ್ಯಟನೆ ಕೈಗೊಂಡಿದ್ದಾರೆ.