ಮಂಗಳೂರು: ಈ ಬಾರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ, ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕರಾವಳಿಯ ಎರಡು ಸ್ಥಾನಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಹಂಚಿಕೊಂಡಿದೆ.
ಬಿಜೆಪಿಯಿಂದ ಕಣಕ್ಕಿಳಿದಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಪುನರಾಯ್ಕೆಯಾಗಿದ್ದಾರೆ.
ಈ ಚುನಾವಣೆ ಕಾಂಗ್ರೆಸ್ ನಾಯಕ ಮಂಜುನಾಥ್ ಭಂಡಾರಿ ಅವರ ರಾಜಕೀಯ ಕನಸನ್ನೂ ನನಸಾಗಿಸಿದೆ. ದ್ವಿ ಸದಸ್ಯ ಕ್ಷೇತ್ರವಾದ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಕಾಂಗ್ರೆಸ್ ನಾಯಕ ಮಂಜುನಾಥ್ ಭಂಡಾರಿ ಅವರು ಗೆದ್ದು ಬೀಗಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಅವರಿಗೆ ಜಯ ಲಭಿಸಿದೆ.
ಮತಗಳ ವಿವರ:
- ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) 3,672 ಮತಗಳು
- ಮಂಜುನಾಥ ಭಂಡಾರಿ (ಕಾಂಗ್ರೆಸ್) 2,079 ಮತಗಳು
ಈ ಮೂಲಕ ಕರಾವಳಿಯಿಂದ ರಾಜ್ಯ ವಿಧಾನ ಪರಿಷತ್‌ಗೆ ಮತ್ತೊಬ್ಬ ಕಾಂಗ್ರೆಸ್ ಶಾಸಕನ ಪ್ರವೇಶವಾಗಿದೆ. ಕಾಂಗ್ರೆಸ್ ಪಾಳಯದಲ್ಲಿ ಪ್ರಭಾವಿ ನಾಯಕನೆನಿಸಿರುವ ಮಂಜುನಾಥ್ ಭಂಡಾರಿ ಅವರು ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಪ್ರಬಲ ಸ್ಪರ್ಧೆಯೊಡ್ಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿ ಗುರುತಾಗಿರುವ ಮಂಜುನಾಥ್ ಭಂಡಾರಿ ಗೆಲುವು ಕಾಂಗ್ರೆಸ್ ಪಾಲಿಗೆ ಹೆಚ್ಚಿನ ಬಲ ತಂದಿದೆ.
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಮಂಜುನಾಥ್ ಭಂಡಾರಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಮಂಜುನಾಥ್ ಭಂಡಾರಿ ಅವರಿಗೆ ಅಭಿನಂದನೆ ಸಲ್ಲಿಸಿದರು.