ಬೆಂಗಳೂರು: ಕರ್ನಾಟಕ ಮತ್ತು ಮೊರಾಕ್ಕೊ ನಡುವೆ ಎರಡೂ ಕಡೆಗಳಿಂದ ನೇರ ವಿಮಾನ ಸಂಪರ್ಕವನ್ನು ಆರಂಭಿಸಿದರೆ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ವೃದ್ಧಿಯಾಗುವ ಸದವಕಾಶವಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಮೊರಾಕ್ಕೊದ ಹೂಡಿಕೆ ಮತ್ತು ರಫ್ತು ಅಭಿವೃದ್ಧಿ ಸಂಸ್ಥೆಯು ಬಂಡವಾಳ ಆಕರ್ಷಿಸಲು ಮೊರಾಕ್ಕೊ ನೌ’ ಉಪಕ್ರಮದಡಿ ನಗರದ ಖಾಸಗಿ ಹೋಟೆಲಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೋಡ್ ಶೋ ಸಭೆಯಲ್ಲಿ ಸಚಿವರು ಮಾತನಾಡಿದರು.
ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದ ನಗರವಾಗಿದ್ದು, ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಹೊಂದಿದೆ. ಕರ್ನಾಟಕ ಮತ್ತು ಮೊರಕ್ಕೊ ಇದರ ಪರಸ್ಪರ ಲಾಭವನ್ನು ಪಡೆದುಕೊಳ್ಳಬೇಕು’ ಎಂದರು.
ಮೊರಕ್ಕೊ ದೇಶವು ಬೆಂಗಳೂರು ಸೇರಿದಂತೆ ಮುಂಬೈ ಮತ್ತು ದೆಹಲಿಯಲ್ಲಿ ರೋಡ್ ಶೋ ಹಮ್ಮಿಕೊಂಡಿದೆ. ರೋಡ್ ಶೊ ಸಲುವಾಗಿ ನಿಯೋಗ ಇಲ್ಲಿಗೆ ಭೇಟಿ ನೀಡಿತ್ತು. ಟಿಸಿಎಸ್, ಇನ್ಫೋಸಿಸ್, ವಿಪ್ರೊ ಸೇರಿದಂತೆ ಹಲವು ದಿಗ್ಗಜ ಐಟಿ ಕಂಪನಿಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಮೊರಾಕ್ಕೊ ರಾಷ್ಟ್ರವು ಭಾರತ ಮತ್ತು ಕರ್ನಾಟಕದಿಂದ ಹೂಡಿಕೆಯನ್ನು ಆಕರ್ಷಿಸಲು ಬೆಂಗಳೂರಿನಿಂದ ತನ್ನ ರೋಡ್-ಶೋ ಆರಂಭಿಸಿರುವುದು ಸ್ವಾಗತಾರ್ಹವಾಗಿದೆ. ಇದೇ ರೀತಿ ಉಳಿದ ರಾಷ್ಟ್ರಗಳು ಕೂಡ ಬೆಂಗಳೂರಿನಿಂದಲೇ ತಮ್ಮ ಹೂಡಿಕೆ ಉತ್ತೇಜನ ಉಪಕ್ರಮಗಳನ್ನು ಆರಂಭಿಸಬೇಕು ಎನ್ನುವುದು ರಾಜ್ಯದ ನಿರೀಕ್ಷೆಯಾಗಿದೆ ಎಂದು ಸಚಿವರು ನುಡಿದರು.
ಮೊರಾಕ್ಕೊ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯ ಅಪಾರ ಸಾಧ್ಯತೆಯನ್ನು ಒಳಗೊಂಡಿದೆ. ನಮ್ಮಲ್ಲಿ ತಂತ್ರಜ್ಞಾನ ವಿಸ್ತರಣೆ ಇತ್ಯಾದಿಗಳಲ್ಲಿ ನಾಸ್ಕಾಂ ಮಹತ್ತರ ಪಾತ್ರ ವಹಿಸುತ್ತಿದೆ. ಹೂಡಿಕೆಯನ್ನು ಆಕರ್ಷಿಸಲು ಜನರ ನಡುವೆ ಪರಸ್ಪರ ಸಂಪರ್ಕ ಮುಖ್ಯವಾಗುತ್ತದೆ. ಜತೆಗೆ ತಮ್ಮ ದೇಶಕ್ಕೆ ಬಂದು ಹೂಡಿಕೆ ಮಾಡಲಿರುವ ಇಲ್ಲಿನ ಕಂಪನಿಗಳಿಗೆ ತೆರಿಗೆ ವಿನಾಯಿತಿಯಂತಹ ಆಕರ್ಷಕ ಸೌಲಭ್ಯಗಳನ್ನು ಕೊಡುವುದು ಮುಖ್ಯ ಎಂದು ಸಚಿವರು ಸಲಹೆ ನೀಡಿದರು.
ಕರ್ನಾಟಕವು ಒಮ್ಮುಖ ನಿಲುವಿನಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ. ನಮ್ಮ ಚಿಂತನೆಗಳು ಜಾಗತಿಕ ಸ್ವರೂಪದಲ್ಲಿದ್ದು, ಸಮಾಜದ ಪ್ರತಿಯೊಬ್ಬರಿಗೂ ಉದ್ದಿಮೆ ಮತ್ತು ತಂತ್ರಜ್ಞಾನಗಳ ಲಾಭ ಸಿಗಬೇಕೆನ್ನುವುದೇ ಸರಕಾರದ ಗುರಿಯಾಗಿದೆ. ಇದಕ್ಕೆ ತಕ್ಕಂತೆ ಭಾರತವು ಇಡೀ ವಿಶ್ವವನ್ನೇ ತನ್ನ ಕುಟುಂಬವೆಂದು ಹೇಳುವ `ವಸುಧೈವ ಕುಟುಂಬಕಂ’ ಎನ್ನುವ ತತ್ತ್ವದಲ್ಲಿ ನಂಬಿಕೆ ಇಟ್ಟುಕೊಂಡಿದೆ ಎಂದು ಅವರು ಹೇಳಿದರು.
ಈ ಮಾತುಕತೆಯ ಸಂದರ್ಭದಲ್ಲಿ ಭಾರತದಲ್ಲಿನ ಮೊರಕ್ಕೊದ ರಾಯಭಾರಿ ಮೊಹಮದ್ ಎಲ್ ಮಾಲಿಕಿ, ಮೊರಾಕ್ಕೊದ ಹೂಡಿಕೆ ಮತ್ತು ರಫ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಯೂಸುಫ್ ಎಲ್ಬಾರಿ, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಸುರೇಂದ್ರ ಮೋಹನ್ ಇದ್ದರು.