ದೆಹಲಿ: ಹಿಂದೂ ಎಂದರೆ ಭಾರತದ ಅಸ್ಮಿತೆ. ಇದನ್ನು ಒಪ್ಪಿಕೊಂಡರೆ ತೊಂದರೆ ಏನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಪ.ಪೂ.ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
‘ವಿಭಜನ್ ಕಾಲೀನ್ ಭಾರತ್ ಸಾಕ್ಷಿ’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಅವರು, ಭಾರತ ಮತ್ತು ಹಿಂದೂ ಎಂಬುದರ ಅರ್ಥದಲ್ಲಿ ಭಿನ್ನಾಭಿಪ್ರಾಯ ಸರಿಯಲ್ಲ ಎಂದರು. ಮತಾಂತರ ಬಹುದೊಡ್ಡ ಪಿಡುಗಾಗಿದೆ ಎಂದು ಪುನರುಚ್ಚರಿಸಿದ ಮೋಹನ್ ಭಾಗವತ್, ‘ಘರ್ ವಾಪ್ಸಿ’ ಬಗೆಗಿನ ಸಂಘದ ನಿಲುವನ್ನು ಸ್ಪಷ್ಟಪಡಿಸಿದರು. ಪೂರ್ವಜರ ಮನೆಗೆ ಮರಳಲು ಬಯಸುವವರನ್ನು ನಾವು ಸ್ವಾಗತಿಸುತ್ತೇವೆ ಎಂದರು.
ದೇಶ ವಿಭಜನೆಯ ಕರಾಳ ನೆನಪು:
ದೇಶ ವಿಭಜನೆಯ ಕರಾಳ ಸನ್ನಿವೇಶವನ್ನು ನೆನಪಿಸಿಕೊಂಡ ಸರಸಂಘಚಾಲಕ್, ಇನ್ನು ಮುಂದೆ ಅಂತಹಾ ಘಟನೆ ನಡೆಯದು ಎಂದರಲ್ಲದೆ, ವಿಭಜನೆ ಸಂದರ್ಭದಲ್ಲಿ ಒಡೆದು ಹೋಗಿದ್ದನ್ನು ಮತ್ತೆ ಒಟ್ಟುಗೂಡಿಸಬೇಕಿದೆ ಎಂದರು.
ವಿಭಜನೆ ಸಂದರ್ಭದಲ್ಲಿ ಭಾರತವು ದೊಡ್ಡ ಅನಾಹುತಕ್ಕೆ ಸಾಕ್ಷಿಯಾಯಿತು. ಅದು ಎಂದೆಂದಿಗೂ ಕರಾಳ ನೆನಪು ಎಂದು ವಿಷಾಧಿಸಿದ ಅವರು, ಮುಂದೆ ಯಾವತ್ತೂ ಆ ಸನ್ನಿವೇಶ ಪುನರಾವರ್ತನೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶ ವಿಭಜಿಸಲು ದೊಡ್ಡ ಸಂಚು ನಡೆದಿತ್ತು, ಆ ರೀತಿಯ ಸಂಚು ಇಂದಿಗೂ ಮುಂದುವರಿದಿರುವುದೇ ಆತಂಕಕಾರಿ ಎಂದವರು ಬೇಸರ ವ್ಯಕ್ತಪಡಿಸಿದರು. ಏನೇ ಆದರೂ ಮುಂದೆ ಎಂದೂ ವಿಭಜನೆಗೆ ಅವಕಾಶ ನೀಡುವುದಿಲ್ಲ. ಅಂತಹಾ ಸನ್ನಿವೇಶಗಳನ್ನು ಎದುರಿಸಲು ನಾವು ಈಗ ಸಜ್ಜಾಗಿದ್ದೇವೆ ಎಂದರು.