ಬೆಂಗಳೂರು: ಸ್ವಾತಂತ್ರ್ಯ ಕುರಿತ ವಿವಾದಿತ ಹೇಳಿಕೆಯನ್ನು ಖಂಡಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಗಾಂಧಿನಗರ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ. ನಟಿ ಕಂಗನಾ ರಣಾವತ್ ನೀಡಲಾದ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಬೇಕೆಂದು ದೂರುದಾರರು ಒತ್ತಾಯ ಮಾಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಂಗನಾ ರಣಾವತ್ 1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ’’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ದ ದೂರು ನೀಡಿರುವ ನಿಯೋಗದಲ್ಲಿ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ, ಜೆ.ಸರವಣನ್, ಕಾಂಗ್ರೆಸ್ ಮುಖಂಡರಾದ ನವೀನ್ ಕುಮಾರ್ ತೇಜಸ್ವಿ, ಉಮೇಶ್ ಬಾಬು, ನಾಗೇಂದ್ರಪ್ರಸಾದ್ ಎಜಾಜ್ ಪಾಷ, ವೆಂಕಟೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.