ಬೆಂಗಳೂರು: ‘ಬಿಟ್ ಕಾಯಿನ್ ಪ್ರಕರಣ ಸಂಬಂಧ 100 ಪರ್ಸೆಂಟ್ ದಾಖಲೆ ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ. ನಾವು ಹೋಗಿ ಯಾವುದೇ ದಾಖಲೆ ಹುಡುಕುತ್ತಿಲ್ಲ. ಸರಕಾರದ ಮಂತ್ರಿಗಳು, ಅಧಿಕಾರಿಗಳೇ ನಮಗೆ ಅದನ್ನು ಒದಗಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು. ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿದ್ದರೂ ಬಿಜೆಪಿ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಬಗ್ಗೆ ಉತ್ತರಿಸಿದ ಅವರು, ‘ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಬಗ್ಗೆ ಸಾಕಷ್ಟು ಮಾತನಾಡಿದ್ದು, ನಿನ್ನೆ ಕುಮಾರಸ್ವಾಮಿ ಅವರು ಕೂಡ ಹೇಳಿದ್ದಾರೆ. ಸರ್ಕಾರ ಪ್ರಕರಣದ ವಿಚಾರವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಅವರಿಗೆ ಅನುಕೂಲವಾಗುವ ಅಂಶಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದೆ ಎಂದರು.
ಪ್ರಧಾನಮಂತ್ರಿಗಳಿಗೆ ಬರೆಯಲಾಗಿರುವ ಪತ್ರದ ಬಗ್ಗೆ ಅವರು ಯಾಕೆ ಮಾತನಾಡುತ್ತಿಲ್ಲ? ಅದು ನಿಜನಾ, ಸುಳ್ಳಾ? ಈ ಬಗ್ಗೆ ತನಿಖೆ ನಡೆಯುತ್ತಿದ್ದು ಅದು ಏನಾಗಿದೆ ಎಂದು ಹೇಳುತ್ತಿಲ್ಲ. ಬಿಟ್ ಕಾಯಿನ್ ವ್ಯವಹಾರ ನಡೆಸುವವರ ಬಗ್ಗೆ ಯಾವುದೇ ತಕರಾರಿಲ್ಲ. ಈ ಪ್ರಕರಣದಲ್ಲಿ ಹ್ಯಾಕಿಂಗ್ ನಡೆದಿದೆಯಾ ಇಲ್ಲವಾ? ಎಂಬುದಷ್ಟೇ ಮುಖ್ಯ. ಈ ಎಲ್ಲ ಪ್ರಶ್ನೆಗಳಿಗೂ ಒಂದೊಂದು ರೀತಿಯ ಸ್ಟೋರಿಗಳು ಬರುತ್ತಿವೆ. ಮಾಧ್ಯಮಗಳು ವರದಿ ಮಾಡುತ್ತಿವೆ. ಹೀಗಾಗಿ ಈ ಪ್ರಕರಣದಲ್ಲಿ ಏನಾಗಿದೆ ಎಂಬ ಸತ್ಯಾಂಶವನ್ನು ಸರ್ಕಾರ ಜನರ ಮುಂದೆ ಇಡಬೇಕು. ಸರ್ಕಾರಕ್ಕೇ ಈ ವಿಚಾರವಾಗಿ ಗೊಂದಲವಿದೆ’ ಎಂದೂ ಹೇಳಿದರು.
ಪ್ರಧಾನಿಗಳೇ ಮುಖ್ಯಮಂತ್ರಿಗಳಿಗೆ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪ್ರಧಾನಮಂತ್ರಿಗಳು ಬಿಟ್ಟುಬಿಡಿ ಎಂದ ಮಾತ್ರಕ್ಕೆ ನಾವ್ಯಾಕೆ ಬಿಟ್ಟುಬಿಡಬೇಕು? ಜನರ ವಿಚಾರ ಇದು. ದೇಶದಲ್ಲಿ ಅವ್ಯವಹಾರ ಯಾರೇ ಮಾಡಿದರೂ ತಪ್ಪೇ. ಅದು ಕಾಂಗ್ರೆಸ್ ಅವರಾಗಲಿ, ಬೇರೆ ಪಕ್ಷದವರಾಗಲಿ, ಜನರೇ ಆಗಲಿ. ಅದರ ಸತ್ಯಾಂಶ ಏನು ಎಂಬುದು ತಿಳಿಯಬೇಕು. ಪೊಲೀಸರು ಮಾಡಿದ ತನಿಖೆಯನ್ನು ಈಗ ಇ.ಡಿ.ಗೆ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಒಂದು, ಐದು, ಹತ್ತು, ಸಾವಿರ ಕಾಯಿನ್ ಅವ್ಯವಹಾರ ಆಗಿದೆಯೋ. ಆ ಸತ್ಯಾಂಶವನ್ನು ಹೊರಗಿಡಬೇಕು ಅಷ್ಟೇ’ ಎಂದು ಉತ್ತರಿಸಿದರು.