ಗದಗ: ಜೆಡಿಎಸ್ ಪಕ್ಷವನ್ನು ರಾಜ್ಯದ ಜನ ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ RSSನ್ನು ಟೀಕಿಸಿದ್ರೆ ಪ್ರಚಾರ ಸಿಕ್ಕುತ್ತೆ ಎಂಬ ಭ್ರಮೆಯಲ್ಲಿ ಜೆಡಿಎಸ್ ನಾಯಕರಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಗದಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಸಿಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಈಶ್ವರಪ್ಪ, 1925ರಲ್ಲಿ ಆರ್.ಎಸ್.ಎಸ್ ಅಸ್ತಿತ್ವದಲ್ಲಿತ್ತು, ಆಗ ದೇವೆಗೌಡ್ರು ಹುಟ್ಟಿರಲಿಲ್ಲ ಎಂದರು.
ದೇವೆಗೌಡರ ಮೂಲಕ ಆರ್.ಎಸ್.ಎಸ್ ಗೆ ಪ್ರಭಾವ ಬೆಳೆಸುವ ಅವಶ್ಯಕತೆ ಇಲ್ಲ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡಲಿ ಎಂದ ಈಶ್ವರಪ್ಪ, ಸೂರ್ಯನಿಗೆ ಬೈದರೆ ದೊಡ್ಡವನಾಗ್ತೀನಿ ಅನ್ನೋ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದರು.
ಕುಮಾರಸ್ವಾಮಿ ಎಲ್ಲಿ, ಆರ್.ಎಸ್.ಎಸ್ ಎಲ್ಲಿ ಎಂದ ತುಲನೆ ಮಾಡಿದ ಈಶ್ವರಪ್ಪ, ಕಾಶ್ಮೀರ ಪಂಡಿತರ ಸಾವಿಗೆ ಆರ್.ಎಸ್.ಎಸ್ ಕಾರಣ ಅಂತಾರೆ. ಈ ರೀತಿ ಕೀಳು ಮಟ್ಟದ ರಾಜಕಾರಣಕ್ಕೆ ಕುಮಾರಸ್ವಾಮಿ ಇಳೀತರೆ ಅಂದುಕೊಂಡಿರಲಿಲ್ಲ ಎಂದರು.
ಕುಮಾರಸ್ವಾಮಿಗೆ ಭಗವಂತ ಬುದ್ದಿಕೊಡಲಿ ಎಂದು ದೇವ್ರಲ್ಲಿ ಬೇಡಿಕೊಳ್ಳುತ್ತೇನೆ ಎಂದ ಸಚಿವ ಈಶ್ವರಪ್ಪ, ಜೆಡಿಎಸ್‌ನವರು ಮುಸ್ಲಿಮರನ್ನು ಸಂತೃಪ್ತಿ ಪಡಿಸಬೇಕು ಅನ್ನೋ ಭ್ರಮೆಯಲ್ಲಿದ್ದಾರೆ. ಆರ್.ಎಸ್.ಎಸ್ ಬಗ್ಗೆ ಮಾತನಾಡಿದ್ರೆ ಪ್ರಚಾರ ಸಿಗುತ್ತೆ ಅಂದ್ಕೊಂಡಿದ್ದಾರೆ ಎಂದು ದೂರಿದರು.
















































