ಉಡುಪಿ : ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳ ವಿರುದ್ಧ ರೈತರು ಇಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಬೈಂದೂರು ಅಂಡರ್ ಪಾಸ್ ಬಳಿ ಕಾಂಗ್ರೇಸ್ ನಾಯಕರು ಮತ್ತು ಕಾರ್ಮಿಕರ ಸಂಘಟನೆಯ ವತಿಯಿಂದ ಪ್ರತಿಭಟನೆ ನೆಡೆಯಿತು.
ಈ ಸಮಯದಲ್ಲಿ ಮಾತನಾಡಿದ ರೈತ ಪರ ಹೋರಾಟಗಾರ ಪ್ರಕಾಶ್ಚಂದ್ರ ಶೆಟ್ಟಿ, ರೈತರಿಗೆ ಮಾರಕವಾಗುವಂತಹ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ರೈತ ಸಮುದಾಯವನ್ನು ಸರ್ವನಾಶ ಮಾಡುವ ಈ ಕಾಯ್ದೆಗಳು ಅವೈಜ್ಞಾನಿಕವಾಗಿವೆ. ಭೂಸುಧಾರಣಾ ಕಾಯ್ದೆ ಜಾರಿಯಾದರೆ ಕೃಷಿ ಕ್ಷೇತ್ರ ಅಧಃಪತನದತ್ತ ಸಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ, ವಿದ್ಯುತ್ ಕಾಯ್ದೆ ತಿದ್ದುಪಡಿಗಳು ಕೂಡ ರೈತರ ಹಕ್ಕನ್ನು ಕಸಿದುಕೊಳ್ಳುವ ಕಾಯ್ದೆಗಳಾಗಿವೆ. ಇವುಗಳ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದ್ದೇವೆ. ರಾಜ್ಯದಲ್ಲೂ ಹೋರಾಟವನ್ನು ತೀವ್ರಗೊಳಿಸುತ್ತೇವೆ. ರೈತರಿಂದ ಅಕಾರಕ್ಕೆ ಬಂದ ಸರ್ಕಾರಗಳು ರೈತರನ್ನು ನಾಶ ಮಾಡುವಂತಹ ಕಾಯ್ದೆಗಳನ್ನು ಜನರಿಗೆ ತರುತ್ತವೆ. ಕಾರ್ಫೋರೇಟ್ ವಲಯಗಳನ್ನು ಪೋಷಿಸಲು ಮುಂದಾಗುತ್ತವೆ. ಇವುಗಳಿಗೆ ಯಾವುದೇ ಕಾರಣಕ್ಕೂ ನಾವು ಆಸ್ಪದ ಕೊಡುವುದಿಲ್ಲ ಎಂದು ಹೇಳಿದರು.
ಕೃಷಿಕರಿಗೆ ಮರಣ ಶಾಸನವಾಗಿರುವ ಈ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ಸುರೇಶ್ ಕಲ್ಲಾಗಾರ್, ವೆಂಕಟೇಶ್ ಕೋಣಿ, ಕಾಂಗ್ರೇಸ್ ಮುಖಂಡರಾದ ಮದನ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ, ಮಂಜುನಾಥ ಪೂಜಾರಿ, ಕಾಂಗ್ರೇಸ್ ಯುವ ಸಂಘಟನೆಯ ಮುಖಂಡರಾದ ಶೇಖರ ಪೂಜಾರಿ, ಸ್ಥಳೀಯರಾದ ಸಂದೇಶ್ ಭಟ್, ಅಣ್ಣಪ್ಪ ಪೂಜಾರಿ ಮತ್ತಿತ್ತರರು ಉಪಸ್ಥಿತರಿದ್ದರು.























































