ಉಡುಪಿ: ಕರಾವಳಿಯ ಸಾಮಾಜಿಕ ಕಾರ್ಯಕರ್ತ, ಕೊಡುಗೈ ದಾನಿ ಗೋವಿಂದ ಬಾಬು ಪೂಜಾರಿಯವರ ಸೇವೆ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಸೂಕ್ತ ಪುರಸ್ಕಾರವೂ ಸಿಕ್ಕಿದೆ. ಕುತೂಹಲಕಾರಿ ತೀರ್ನಾನವೊಂದರಲ್ಲಿ ವಿವಿಧ ದೇಶಗಳಲ್ಲಿ ಶೈಕ್ಷಣಿಕ, ವೈದಿಕ ಕ್ಷೇತ್ರಗಳನ್ನು ಹೊಂದಿರುವ ‘ಏಷ್ಯಾ ವೈದಿಕ ಕಲ್ಚರಲ್ ಫೌಂಡೇಶನ್‌ನ ವಿಶ್ವವಿದ್ಯಾಲಯವು ಗೋವಿಂದ ಬಾಬು ಪೂಜಾರಿಯವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಇದು ಬರೀ ಪ್ರಶಸ್ತಿಯಲ್ಲ, ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಅತ್ಯುನ್ನತ ಪದವಿ.
ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ವಿಶ್ವದ ಹಲವು ಮಂದಿಯ ಹೆಸರುಗಳ ಪೈಕಿ ಅಳೆದು ತೂಗಿ ಗೋವಿಂದ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ. ಡಾಕ್ಟರೇಟ್ ಪದವಿ ಪಡೆದಿರುವ ಇವರು ಇದೀಗ ಡಾ.ಗೋವಿಂದ ಪೂಜಾರಿ.
ಈ ನಡುವೆ, ಇದೀಗ ಎಲ್ಲೆಲ್ಲೂ ಡಾ.ಗೋವಿಂದ ಪೂಜಾರಿ ಅವರದ್ದೇ ಮಾತು. ಈ ವರೆಗೂ ಮಾನವೀಯತೆ ಮೂಲಕ ಪಕ್ಷಾತೀತವಾಗಿ ದಾನ-ಧರ್ಮ-ಉದ್ಯೋಗ ಪರ್ವದಲ್ಲಿ ತೊಡಗಿರುವ ಡಾ.ಗೋವಿಂದ ಪೂಜಾರಿ ಅವರನ್ನು ರಾಜಕೀಯ ಪಕ್ಷಗಳು ಆಹ್ವಾನಿಸತೊಡಗಿರುವುದು ಅಚ್ಚರಿಯ ಬೆಳವಣಿಗೆ.
ಪೂಜಾರಿಯವರಿಗೆ ಗೌರವ ಡಾಕ್ಟರೇಟ್ ಪ್ರದಾನವಾಗಿರುವ ಸುದ್ದಿ ‘ಉದಯನ್ಯೂಸ್’ನಲ್ಲಿ ಪ್ರಕಟವಾಗಿದ್ದೇ ತಡ, ಶನಿವಾರ ಒಂದೇ ದಿನ ಬರೋಬ್ಬರಿ 23 ಮಂದಿ ರಾಜಕೀಯ ನಾಯಕರು ಮಾಧ್ಯಮ ಕಚೇರಿಗೆ ಕರೆ ಮಾಡಿ ಗೋವಿಂದ ಪೂಜಾರಿಯವರ ಫೋನ್ ನಂಬರ್ ಕೇಳಿದ್ದಾರೆ. ಈ ಬಗ್ಗೆ ಡಾ.ಪೂಜಾರಿಯವರ ಗಮನಸೆಳೆದಾಗ ತಮಗೂ ಸಚಿವರು, ಶಾಸಕರು ಹಾಗೂ ನಾಯಕರನೇಕರು ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಕರೆ ಮಾಡಿ ಅಭಿನಂಧಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಈ ನಡುವೆ, ಡಾ.ಗೋವಿಂದ ಪೂಜಾರಿಯವರು ರಾಜಕೀಯ ಪ್ರವೇಶಿಸುತ್ತಾರ ಎಂಬ ಪ್ರಶ್ನೆ ಅವರ ಆಪ್ತ ವಲಯದಲ್ಲಿ ಹರಿದಾಡತೊಡಗಿದೆ. ಬಿಜೆಪಿಗೆ ಹೋಗ್ತಾರ? ಕೈ ಹಿಡಿಯುತ್ತಾರ? ಎಂಬ ಬಗ್ಗೆ ಚರ್ಚೆಗಳೂ ಬಿರುಸುಗೊಂಡಿದೆ.
- ಕಮಲ ಪಾಳಯವೋ?
- ಕೈ ಅಂಗಳವೋ?
ಅಂದ ಹಾಗೆ ಡಾ.ಗೋವಿಂದ ಪೂಜಾರಿಯವರು ಬಿಜೆಪಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಮಂತ್ರಿ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಸಹಿತ ಬಿಜೆಪಿ-ಆರೆಸ್ಸೆಸ್ ನಾಯಕರಿಗೆ ಆಪ್ತರು. ಸಿದ್ದರಾಮಯ್ಯ, ಡಿಕೆಶಿ ಬಳಗದವರಿಗೂ , ಪ್ರಮೋದ್ ಮಧ್ವರಾಜ್ ಸಹಿತ ಕಾಂಗ್ರೆಸ್ ನಾಯಕರಿಗೂ ಇವರು ಪ್ರೀಯರು. ಹಾಗಾಗಿ ಎರಡೂ ಪಕ್ಷದಲ್ಲೂ ಪೂಜಾರಿ ಅವರಿಗೆ ಬಾಗಿಲು ತೆರೆದಿದೆ. ಆದರೆ ಈ ಬಗ್ಗೆ ಪೂಜಾರಿ ಅವರದ್ದು ‘ಮೌನ’ವೇ ಪ್ರತಿಕ್ರಿಯೆ.
ಆದರೆ ಅಭಿಮಾನಿಗಳಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಭವಿಷ್ಯವಿದೆ ಎಂದು ಹಲವರು ಪ್ರತಿಪಾದಿಸಿದರೆ, ಇವರು ಆರೆಸ್ಸೆಸ್ ಆಪ್ತ ವಲಯದಲ್ಲಿ ಪರಿಚಯವಿರುವುದರಿಂದ ಬಿಜೆಪಿಗೆ ಬರಲಿ ಎಂದು ಅನೇಕರು ಸಲಹೆ ಮಾಡಿದ್ದಾರೆ. ಶೋಷಿತರ ಪರ ಧ್ವನಿಯಾಗಬೇಕಾದರೆ ಕಾಂಗ್ರೆಸ್ ಪಕ್ಷ ಸೇರಲಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ, ಡಾ.ಗೋವಿಂದ ಪೂಜಾರಿಯವರ ಸಾಮಾಜಿಕ ಜಾಲತಾಣದ ಗ್ರೂಪ್‌ನಲ್ಲಿ ಪ್ರತಿಧ್ವನಿಸಿದ್ದೇ ಬೇರೆ. ‘ಬಹುತೇಕ ಮಂದಿ ಪೂಜಾರಿಯವರನ್ನು ದೇವಧೂತ ಎಂಬಂತೆ ಕಾಣುತ್ತಿದ್ದಾರೆ. ರಾಜಕೀಯ ಉದ್ದೇಶವಿಲ್ಲದೆ ದಾನ ಧರ್ಮ ಮಾಡಿರುವ ಇವರು ರಾಜಕೀಯದಿಂದ ದೂರ ಉಳಿಯಲಿ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದೇ ವೇಳೆ, ಶೋಷಿತ ಬಿಲ್ಲವ ಸಮುದಾಯದಲ್ಲಿ ಅಪರಂಜಿಯಂತಿರುವ ನಾಯಕ ಇರಬೇಕು. ಹಾಗಾಗಿ ರಾಜಕೀಯ ಪ್ರವೇಶಿಸಲೇಬೇಕು. ಶಾಸಕರಾಗಲೇ ಬೇಕು ಎಂಬ ಸಲಹೆ ಮುಂದಿಟ್ಟಿದ್ದಾರೆ. ಇವರುಸ್ವಂತ ದುಡಿದ ಹಣದಲ್ಲೇ ಹಲವಾರು ವರ್ಷದಿಂದ ರಾಜ್ಯದ್ಯಂತ ಸುದ್ದಿಯಾಗುವಷ್ಟು ಬಡವರ, ಅಸಹಾಯಕರ ಸಾಮಾಜಿಕ ಸೇವೆ ಮಾಡಿದ್ದಾರೆ. ಹೀಗಿರುವಾಗ ಮುಂದೆ ಇವರು ಇನ್ನು ರಾಜಕೀಯಕ್ಕೆ ಬಂದರೆ ಎಷ್ಟು ಮಾಡಬಹುದು ಎನ್ನುವ ಕುತೂಹಲ ಅವರ ತವರು ಬೈಂದೂರಿನ ಜನರದ್ದು.
ಈ ಮಧ್ಯೆ, ‘ಡಾ.ಪೂಜಾರಿ ಅವರು ಯಾವುದೇ ಪಕ್ಷ ಸೇರಲಿ, ನಾವು ಪಕ್ಷಾತೀತವಾಗಿ ಬೆಂಬಲಿಸೋಣ’ ಎಂಬ ಮಾತು ಕೂಡಾ ಕೇಳಿಬಂದಿದೆ. ಆದರೆ ಡಾ.ಪೂಜಾರಿ ಮಾತ್ರ ‘ಮೌನ’ ಮುರಿದಿಲ್ಲ.