ಬೆಂಗಳೂರು: ಅಂತೂ ಇಂತೂ ಶಾಲಾರಂಭಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ರಾಜ್ಯದಲ್ಲಿ 6, 7 ಹಾಗೂ 8 ನೇ ತರಗತಿ ಶಾಲೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ.
ಕೊರೋನಾ ಸೋಂಕಿನ ಆತಂಕದಿಂದಾಗಿ ಈ ವರೆಗೂ ಶಾಲೆಗಳ ಆರಂಭ ವಿಳಂಬವಾಗಿತ್ತು. ಇದೀಗ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ತರಗತಿಗಳ ಕಾರ್ಯಾರಂಭಕ್ಕೆ ಅನುಮತಿ ನೀಡಲು ತೀರ್ಮಾನಿಸಿದೆ.
ಈ ಸಂಬಂಧ ಬೆಂಗಳೂರಿನಲ್ಲಿಂದು ನಡೆದ ಉನ್ನತಮಟ್ಟದ ಸಭೆ ಕುತೂಹಲದ ಕೇಂದ್ರಬಿಂದುವಾಯಿತು. ತಜ್ಞರ ಜೊತೆ ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್. ಅಶೋಕ್ ಅವರು, ಕೋವಿಡ್ ಪಾಸಿಟಿವಿಟಿ ದರ 2 % ಕಡಿಕೆ ಇರುವ ತಾಲೂಕುಗಳಲ್ಲಿ ಶಾಲೆಗಳು ಆರಂಭವಾಗಲಿದೆ ಎಂದರು.
ಕೋವಿಡ್ ಮಾರ್ಗಸೂಚಿ ಅನುಸರಿಸಿ 6, 7 ಹಾಗೂ 8ನೇ ತರಗತಿಗಳು ಸೆಪ್ಟೆಂಬರ್ 6 ರಿಂದ ಆರಂಭವಾಗಲಿದೆ. ಭೌತಿಕ ತರಗತಿಗಳನ್ನಹ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡುತ್ತಿದೆ ಎಂದರು.
ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಶಾಲೆ ತೆರೆಯಲಿದೆ. ಶನಿವಾರ ಹಾಗೂ ಭಾನುವಾರ ತರಗತಿ ಇರುವುದಿಲ್ಲ. ಅಂದು ಶಾಲೆಗಳಲ್ಲು ಸ್ಯಾನಿಟೈಸ್ ಕಾರ್ಯ ನಡೆಯಲಿದೆ ಎಂದ ಅವರು, ಶೇಕಡಾ 50ರಷ್ಟು ಹಾಜರಾತಿಯೊಂದಿಗೆ ಒಂದು ದಿನ ಗ್ಯಾಪ್ ನೊಂದಿಗೆ ತರಗತಿ ನಡೆಸಲಾಗುತ್ತದೆ ಎಂದರು.