ಗದಗ: ಕರಾವಳಿ ಮಲೆನಾಡು ಮಾತ್ರವಲ್ಲ, ಒಳನಡು, ಬಯಲುಸೀಮೆಯ ಜಿಲ್ಲೆಗಳಲ್ಲೂ ಮಳೆ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ನದಿಗಳೂ ತುಂಬಿ ಹರಿಯುತ್ತಿವೆ. ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಈ ನಡುವೆ ಗದಗ್ ಜಿಲ್ಲೆಯೂ ಭಾರೀ ಮಳೆಯಿಂದಾಗಿ ತತ್ತರಗೊಂಡಿದೆ. ಗದಗ ಜಿಲ್ಲೆಯಲ್ಲಿ ನಿನ್ನೆ ಸಂಜೆ ನಂತರ ಹಲವೆಡೆ ಭಾರಿ ಮಳೆಯಾಗಿದ್ದರಿಂದ ಜನತೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ನರಗುಂದ ತಾಲೂಕಿನ ಕೊಣ್ಣೂರ,ವಾಸನ ಲಖಮಾಪೂರು ಹಾಗೂ ಬೆಳ್ಳೇರಿ ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಯಿತಿ. ಕೊಣ್ಣೂರ ಭಾಗದಲ್ಲಿ ರಸ್ತೆ ಹಾಗೂ ಬೆಳೆಗಳು ಜಲಾವೃತವಾಗಿದ್ದು 2 ಗಂಟೆಗೂ ಹೆಚ್ಚು ಹೊತ್ತು ಸುರಿದ ಮಹಾ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಸಾರ್ವಜನಿಕರು, ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ. ಮನೆಗೆ ನುಗ್ಗಿದ ನೀರು ಹೊರ ಹಾಕುವಷ್ಟರಲ್ಲಿ ಜನರು ಸುಸ್ತಾಗಿ ಹೋಗಿದ್ದಾರೆ.
ಮಳೆರಾಯನ ಆರ್ಭಟಕ್ಕೆ ರೈತರು ಬೆಳೆದ ಹೆಸರು, ಗೋವಿನ ಜೋಳ, ಹತ್ತಿ, ಪೇರಲು ಸೇರಿದಂತೆ ವಿವಿಧ ಬೆಳೆಗಳು ತಗ್ಗು ಪ್ರದೇಶದ ಜಮೀನುಗಳಲ್ಲಿ ಹಾನಿ ಸಂಭವಿಸಿದೆ. ಕಳೆದ ಎರಡು ವರ್ಷಗಳಿಂದ ಮಲಪ್ರಭಾ ನದಿಯ ಪ್ರವಾಹದಿಂದ ಹಾನಿಗೆ ಒಳಗಾಗುತ್ತಿದ್ದ ಬೆಳೆಗಳು ಇವಾಗ ಮಳೆರಾಯನ ಅಬ್ಬರಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ಸಾಲಾ ಸೂಲ ಮಾಡಿ ಬೆಳೆದ ಹಾನಿ ಕಂಡು ರೈತರು ಕಂಗಾಲಾಗಿದ್ದಾರೆ.