ಬೆಂಗಳೂರು: ಕೋವಿಡ್-19 ಸೋಂಕು ಪ್ರಸರಣದಿಂದಾಗಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳು, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಅತಿ ಶೀಘ್ರದಲ್ಲಿ ಫಲಿತಾಂಶಗಳನ್ನು ಘೋಷಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತಂತೆ ಅಧಿಕೃತ ಸರ್ಕಾರದ ಆದೇಶ ಪ್ರಕಟಣೆಗೆ ಕ್ರಮ ವಹಿಸಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೆ ಅನುಗುಣವಾಗಿ ಫಲಿತಾಂಶಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಘೋಷಿತ ಫಲಿತಾಂಶದಿಂದ ಪಡೆದ ಅಂಕಗಳು ತೃಪ್ತಿಕರವೆನಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪುನರಾವರ್ತಿತ ಅಭ್ಯರ್ಥಿಗಳ ತೇರ್ಗಡೆ :
ಕೋವಿಡ್-19 ಸೋಂಕು ಪ್ರಸರಣದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ ಪುನರಾವರ್ತಿತ ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸಲು ಇಲಾಖೆ ನಿರ್ಧರಿಸಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು ಮತ್ತು ಶೇ. 5ರಷ್ಟು ಕೃಪಾಂಕಗಳನ್ನು ನೀಡಿ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್-19 ಸೋಂಕು ಪ್ರಸರಣದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಧಾರ ಕೈಗೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಪುನರಾವರ್ತಿತ ಅಭ್ಯರ್ಥಿಗಳನ್ನೂ ಸಹ ಉತ್ತೀರ್ಣಗೊಳಿಸಬೇಕೆಂದು ಕೆಲವರು ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಪುನರಾವರ್ತಿತ ಅಭ್ಯರ್ಥಿಗಳನ್ನೂ ಈ ವರ್ಷದ ಮಟ್ಟಿಗೆ ಉತ್ತೀರ್ಣಗೊಳಿಸುವ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದು, ಸರ್ಕಾರದ ನಿಲುವನ್ನು ಹೈಕೋರ್ಟ್ ಸಮ್ಮತಿಸಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.