ಬೆಂಗಳೂರು: ಮೈಸೂರಿನ ಐಎಎಸ್ ಅಧಿಕಾರಿಗಳ ಕಲಹದಿಂದ ಉಂಟಾಗಿರುವ ಹೈಡ್ರಾಮಾಕ್ಕೆ ತೆರೆ ಬಿದ್ದಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ರಾಜ್ಯ ಸರ್ಕಾರ ರಾತ್ರೋ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮೈಸೂರು ಡಿಸಿ ರೋಹಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ಆರ್.ಡಿ.ಪಿ.ಆರ್.ಇ ಆಯುಕ್ತರ ಸ್ಥಾನಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಏನಿದು ಗೊಂದಲ..?
ಕೋವಿಡ್ ನಿರ್ವಹಣೆ ವಿಚಾರದಲ್ಲಿನ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಈ ಇಬ್ಬರು ಐಎಎಸ್ ಅಧಿಕಾರಿಗಳ ನಡುವೆ ಕಲಹ ಏರ್ಪಟ್ಟಿದೆ ಎನ್ನಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ ಶಿಲ್ಪಾ ನಾಗ್ ಅವರು ರಾಜೀನಾಮೆ ನಿರ್ಧಾರ ಕೈಗೊಂಡಿದ್ದರು. ಈ ಇಬ್ಬರು ಅಧಿಕಾರಿಗಳ ನಡುವಿನ ಜಟಾಪಟಿಯಿಂದ ಉಂಟಾದ ಗೊಂದಲ ಬಗೆಹರಿಸಲು ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರೇ ಅಖಾಡಕ್ಕಿಳಿದಿದ್ದರು.
ಇದೀಗ ಈ ಇಬ್ಬರು ಮಹಿಳಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿ ಮೈಸೂರು ಹೈಡ್ರಾಮಾಕ್ಕೆ ಭಾಗಶಃ ತೆರೆಎಳೆದಿದೆ.