ಮಂಗಳೂರು: ಕರಾವಳಿಯ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ಅವರು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದ್ದಾರೆ. ಕೊರೋನಾ ಸಂಕಟ ಕಾಲದಲ್ಲಿ ಸೋಂಕಿತರಿಗೆ ಬೆಡ್, ಆಕ್ಸಿಜನ್ ಸಿಗದೆ ಅವಾಂತರ ಸೃಷ್ಟಿಯಾಗುತ್ತಿದೆ. ಕೊರೋನಾ ಸೋಂಕಿತರು ಪರದಾಡುವಂತಹಾ ಸ್ಥಿತಿ ಇದೆ. ಈ ಸಂದರ್ಭದಲ್ಲಿ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಆದರೆ ಈ ವಿಚಾರದಲ್ಲಿ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ನೋವು ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತರೂ ಆದ ಅಶೋಕ್ ರೈ, ತಾವೇ ಸುಸಜ್ಜಿತ ಆಸ್ಪತ್ರೆಯೊಂದನ್ನು ನಿರ್ಮಿಸಿ ಕೊಡಲು ಸಿದ್ದವಿರುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಪುತ್ತೂರಿನ ಕಿಲ್ಲೇ ಮೈದಾನದಲ್ಲಿ 150 ಬೆಡ್‌ನ ಆಸ್ಪತ್ರೆ ಮಾಡಿ ಎಂದು ಸರ್ಕಾರ ಹೇಳಲಿ ನಾವು ನಿರ್ಮಿಸಿಕೊಡಲು ಸಿದ್ದ ಎಂದಿದ್ದಾರೆ. ಅದಕ್ಕೆ ಆಕ್ಸಿಜನ್ ಪೂರೈಸಲಿ, ಇನ್ನುಳಿದ ಎಲ್ಲಾ ಸೌಲಬ್ಯವನ್ನು ನಾನೇ ಕಲ್ಪಿಸಿ, ಸುಸಜ್ಜಿತ ಕೋವಿಡ್ ಕೇರ್ ನಿರ್ಮಿಸಿಕೊಡಲು ಸಿದ್ದ ಎಂದಿದ್ದಾರೆ.
ಇಲ್ಲಿದೆ ನೋಡಿ.. ಅಶೋಕ ರೈ ಕೋಡಿಂಬಾಡಿ ಅವರ ಸಂದರ್ಶನ..
ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದ ಅನುಮತಿ ಬೇಕು. ತರಾತುರಿಯಲ್ಲಿ ನಾವೇ ಆಸ್ಪತ್ರೆ ನಿರ್ಮಿಸಿದೃ ನಾಳೆ ಸರ್ಕಾರ ತಕರಾರು ತೆಗೆದು ವಿವಾದ ಉಂಟಾಗಬಹುದು. ಹಾಗಾಗಿ ಜನಪ್ರತಿನಿಧಿಗಳು ಸರ್ಕಾರದಿಂದ ಅನುಮತಿ ಕೊಡಿಸಿದರೆ ನಾನು ನಮ್ಮ ಟ್ರಸ್ಟ್ ವತಿಯಿಂದಲೇ ಸಕಲ ವೆಚ್ಚ ಭರಿಸಿ ಸುಸಜ್ಜಿತ ಕೋವಿಡ್ ಕೇರ್ ನಿರ್ಮಿಸಲು ಸಿದ್ದ ಎಂದು ಅಶೋಕ್ ರೈ ಹೇಳಿದ್ದಾರೆ.
ಸುದೀರ್ಘ ಸಾಮಾಜಿಕ ಕಾರ್ಯ:
ಹಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ ಮಂಗಳೂರು ಸಹಿತ ಕರಾವಳಿಯ ಹಲವೆಡೆ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವ ಉದ್ಯಮಿ ಅಶೋಕ್ ರೈ, ಹಲವು ಶಿಕ್ಷಣ ಸಂಸ್ಥೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಜನಾನುರಾಗಿ ಎನಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಬಡ ಕುಟುಂಬಗಳಿಗೆ ಆರೋಗ್ಯ ನೆರವು ನೀಡಿದ್ದಲ್ಲದೆ ನೂರಾರು ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟು ಸಾಮಾಜಿಕ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಕರಾವಳಿಯ ಜನಪದ ಕ್ರೀಡೆ ಕಂಬಳವು ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಸುದೀರ್ಘ ಕಾನೂನು ಹೋರಾಟದಲ್ಲಿ ಭಾಗಿಯಾಗಿ ಎಲ್ಲರ ಗಮನ ಕೇಂದ್ರೀಕರಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಅಶೋಕ್ ರೈ ಕೋಡಿಂಬಾಡಿ ಸ್ಪರ್ಧಿಸುವ ಸಾಧ್ಯತೆಗಳ ಕುರಿತು ಮಾತುಗಳೂ ಹರಿದಾಡುತ್ತಿದ್ದವು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರು ಚುನಾವಣೆಯಿಂದ ದೂರ ಉಳಿಯಬೇಕಾಯಿತು ಎನ್ನಲಾಗಿದೆ