ಬೆಂಗಳೂರು: ಚಾಮರಾಜನಗರ, ಕಲಬುರಗಿ, ಬೆಳಗಾವಿ ಸಹಿತ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದಾದ ಅನಾಹುತಗಳಿಂದ ಕೆರಳಿರುವ ಪ್ರತಿಪಕ್ಷಗಳು ಇದೀಗ ಆರೆಸ್ಸೆಸ್ ಕಾರ್ಯಾಲಯದ ಬಾಗಿಲು ತಟ್ಟಿವೆ. ಈ ಸರಣಿ ದುರಂತಗಳ ಹಿನ್ನೆಲೆಯಲ್ಲಿ ಸಚಿವರ ರಾಜೀನಾಮೆಗೆ ಸೂಚಿಸಿ. ಇಲ್ಲವೇ ಆಕ್ಸಿಜನ್‌ನಿಂದಾದ ಸಾವಿಗೆ ನೀವೇ ಹೊಣೆಯಾಗುತ್ತೀರಿ ಎಂದು ಕೆಪಿಸಿಸಿ ಹೇಳಿದೆ.
ಆಮ್ಲಜನಕ ಕೊರತೆಯಿಂದಾದ ಸರಣಿ ಘಟನೆಗಳ ಕುರಿತಂತೆ ಪ್ರತಿಕ್ರಯಿಸಿರುವ ಕೆಪಿಸಿಸಿ ವಕ್ತಾರರೂ ಆದ, ಮಾಜಿ ಶಾಸಕ ರಮೇಶ್ ಬಾಬು, ರಾಜ್ಯದಲ್ಲಿ ಸರಣಿ ಸಾವುಗಳು ಸಂಭವಿಸಿ ರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಯಾಗಿದ್ದರೂ ಆರೆಸ್ಸೆಸ್ ನಾಯಕರು ಮೌನವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಸೋಕಿನ ಅಲೆಯನ್ನು ಸುನಾಮಿ ಎಂದೇ ಹೇಳಬಹುದೆಂದು ನ್ಯಾಯಾಲಯಗಳೂ ಹೇಳಿವೆ. ಹೀಗಿದ್ದರೂ ದೇಶವನ್ನು ಮುನ್ನಡೆಸುತ್ತಿರುವ ಬಿಜೆಪಿಯ ಮಾತೃ ಸಂಘಟನೆ ನಿಮ್ಮದಲ್ಲವೇ? ಮಾತೃ ಸ್ಥಾನದಲ್ಲಿರುವ ನಿಮಗೂ ಹೊಣೆಗಾರಿಕೆ ಇದೆಯಲ್ಲವೇ? ಕೊರೊನಾ ಸಾವು ದೇಶಕ್ಕೆ ಬಂದ ಗಂಡಾಂತರ ಅಲ್ಲವೇ? ಎಂದು ಸರಣಿ ಪ್ರಶ್ನೆಗಳ ಮೂಲಕ ಸಂಘ ಪರಿವಾರದ ಹೊಣೆ ಬಗ್ಗೆ ಬೊಟ್ಟು ಮಾಡಿರುವ ರಮೇಶ್ ಬಾಬು, ಈ ಸರಣಿ ದುರಂತಗಳ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರಾದ ಸುಧಾಕರ್, ಹಾಗೂ ಘಟನೆ ನಡೆದಿರುವ ಜಿಲ್ಲೆಗಳ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್, ಮುರುಗೇಶ್ ನಿರಾಣಿ ಅವರಿಂದ ರಾಜೀನಾಮೆ ಕೊಡಿಸಬೇಕೆಂದು ಆರೆಸ್ಸೆಸ್ ಮುಖಂಡರನ್ನು ಒತ್ತಾಯಿಸಿದ್ದಾರೆ.
ರಾಷ್ತ್ರೀಯವಾದವನ್ನು ಪ್ರತಿಪಾದಿಸುತ್ತಿರುವುದು ಹೌದಾದರೆ ಈ ಘಟನೆಯನ್ನೂ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಲು ಸೂಚಿಸಿ ಎಂದು ರಮೇಶ್ ಬಾಬು ಅವರು ಆರೆಸ್ಸೆಸ್ ನಾಯಕರಾದ ದತ್ತಾತ್ರೇಯ ಹೊಸಬಾಳೆ, ಮುಕುಂದ್, ಹಾಗೂ ಸಂತೋಷ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರ ಪತ್ರ ಹೀಗಿದೆ:
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರೇ, ಪ್ರಸಕ್ತ ದೇಶದಲ್ಲಿ ಕೋವಿಡ್ ಸೋಕು ಈಗ ಅಲೆಯ ಹಿಂದೆ ಮತ್ತೊಂದು ಅಲೆಯಾಗಿ ಬರುತ್ತಿದೆ. ಇದನ್ನು ಅಲೆ ಎಂದು ಹೆಳುವ ಬದಲು ಸುನಾಮಿ ಎಂದೇ ಹೇಳಬಹುದೆಂದು ನ್ಯಾಯಾಲಯಗಳೂ ಹೇಳಿವೆ. ಹೀಗಿದ್ದರೂ ದೇಶವನ್ನು ಮುನ್ನಡೆಸುತ್ತಿರುವ ಬಿಜೆಪಿಯ ಮಾತೃ ಸಂಘಟನೆ ನಿಮ್ಮದಲ್ಲವೇ? ಮಾತೃ ಸ್ಥಾನದಲ್ಲಿರುವ ನಿಮಗೂ ಹೊಣೆಗಾರಿಕೆ ಇದೆಯಲ್ಲವೇ? ಕೊರೊನಾ ಸಾವು ದೇಶಕ್ಕೆ ಬಂದ ಗಂಡಾಂತರ ಅಲ್ಲವೇ?
ಕರ್ನಾಟಕದ ಪರಿಸ್ಥಿತಿ ನಿಮಗೇ ಗೊತ್ತು. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಾರಣ ಹೋಮವೇ ನಡೆಯುತ್ತಿದೆ. ಆದರೂ ದೇಶ ಭಕ್ತ RSS ಮೌನಕ್ಕೆ ಶರಣಾಗಿದೆ. ಇದೇ ಅಪ್ಪಟ ದೇಶ ಭಕ್ತಿ!
(೧) ಕೆಲವೇ ದಿನಗಳ ಹಿಂದೆ ಕೋಲಾರದಲ್ಲಿ ಆಕ್ಸಿಜನ್ ಕೊರತೆಯಿಂದ ಹಲವರು ಸಾವನ್ನಪ್ಪಿದ್ದರು.
(೨) ಮೇ 3ರಂದು ಚಾಮರಾಜನಗರದ ಆಸ್ಪತ್ರೆಯಲ್ಲಿ 28 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ.
(೩) ಮೇ 4ರಂದು ಕಲಬುರಗಿಯ ಆಫ್ಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ನಾಲ್ವರು ರೋಗಿಗಳು ಆಕ್ಸಿಜನ್ ಇಲ್ಲದೆ ಅಸು ನೀಗಿದ್ದಾರೆ.
(೪) ಅದೇ ದಿನ (ಮೇ.4ರಂದು) ಬೆಳಗಾವಿಯ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ಆಕ್ಸಿಜನ್ ಕೊರತೆಯಿಂದ ಕೊನೆಯುಸಿರೆಳೆದಿದ್ದಾರೆ.
ಈ ಅನಾಹುತಕ್ಕೆ ಆರೋಗ್ಯ ಸಚಿವ ಸುಧಾಕರ್, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರೇ ಹೊಣೆ ಅಲ್ಲವೇ?
ಈ ಮೂರೂ ಮಂದಿ ಇನ್ನೂ ಸಚಿವರಾಗಿ ಮುಂದುವರಿಯಬೇಕೆಂಬುದು ಆರ್‌ಎಸ್‌ಎಸ್ ಸಂಘಟನೆಯ ಬಯಕೆಯೇ? ಹಾಗೊಂದು ವೇಳೆ ಅದೇ ಬಯಕೆ ಎಂದಾಗಿದ್ದರೆ ಈ ಸಾವಿನ ಅಧ್ಯಾಯದ ಹೊಣೆಯನ್ನು ನಿಮ್ಮ ಸಂಘಟನೆಯೇ ಹೊತ್ತುಕೊಳ್ಳಲಿ, ನಿಮ್ಮ ದೇಶ ಭಕ್ತಿ ಸಮಾಜಕ್ಕೆ ತಿಳಿಯಲಿ!
ತಮ್ಮದು ರಾಷ್ಟ್ರೀಯವಾದದ ಸಿದ್ದಾಂತದ ಸಂಘಟನೆ ಎನ್ನುತ್ತಿರುವ ಆರ್‌ಎಸ್‌ಎಸ್ ನಾಯಕರು ಈ ಆಕ್ಸಿಜನ್ ದುರಂತವನ್ನು ರಾಷ್ಟ್ರೀಯ ದುರಂತ ಎಂದು ಪರಿಗಣಿಸಬೇಕಲ್ಲವೇ? ಅದಕ್ಕೆ ಕಾರಣರಾಗಿರುವ ಸಚಿವರ ತಲೆದಂಡಕ್ಕೆ ಸೂಚಿಸಬೇಕಲ್ಲವೇ? ಬಿಜೆಪಿಯ ಮಾತೃ ಸ್ಥಾನದಲ್ಲಿದ್ದುಕೊಂಡು ಮಾರ್ಗದರ್ಶನ ಮಾಡುತ್ತಿರುವ ಆರ್‌ಎಸ್‌ಎಸ್ ನಾಯಕರು ನೀವು ನಿದ್ದೆಯಲ್ಲಿದ್ದೀರಾ? ಇದು ಭಾರತ ದೇಶದ ಕರ್ನಾಟಕದಲ್ಲೇ ನಡೆದಿರುವ ಕ್ರಿಮಿನಲ್ ನೆಗ್ಲಿಜೆನ್ಸ್ ದುರಂತ ಹೌದಲ್ಲವೇ?
ಆರ್‌ಎಸ್‌ಎಸ್ ಸಂಘಟನೆಯ ರಾಷ್ಟ್ರೀಯ ನಾಯಕರಾಗಿರುವ ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆಯವರಿಗೆ, ಬಿಎಲ್ ಸಂತೋಷ್ ಅವರಿಗೆ, ಮುಕುಂದ ಅವರಿಗೆ ಯಾವ ಭಾಷೆಯಲ್ಲಿ ಹೇಳಬೇಕೇ? ಅಥವಾ ಪ್ರತಿಯೊಬ್ಬ ಆರ್‌ಎಸ್‌ಎಸ್ ಕಾರ್ಯಕರ್ತರ ಮೂಲಕ ಛೀಮಾರಿ ಬೇಕಾ? ನಿಮ್ಮ ಮೌಲ್ಯಗಳನ್ನು ಬೀದಿಗೆ ಬಿಡದೆ ಈ ಆಕ್ಸಿಜನ್ ದುರಂತಗಳಲ್ಲಿನ ಸಾವಿಗೆ ಹೊಣೆಯಾಗಿರುವ ಸಚಿವರಾದ ಸುಧಾಕರ್, ಸುರೇಶ್ ಕುಮಾರ್, ಮುರುಗೇಶ್ ನಿರಾಣಿ ಅವರ ರಾಜೀನಾಮೆಗೆ ಸೂಚಿಸಿ. ಆ ಮೂಲಕ ನಿಮ್ಮ ಸಂಘಟನೆಯ ಪರಿಶುದ್ಧತೆಯನ್ನು ಜಗತ್ತಿಗೆ ತೋರಿಸಿ.
ಸಂಕಷ್ಟದ ಸಮಯದಲ್ಲಿ ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಗೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದ ವಿರೋಧ ಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶ್ರೀ DK ಶಿವಕುಮಾರ್ ಮತ್ತು ಇತರೆ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಪತ್ರ ಬರೆದಿದ್ದಾರೆ.