ಕಾಸರಗೋಡು: ದೇವರ ನಾಡು ಕೇರಳದಲ್ಲಿ ಬಿಜೆಪಿಗೆ ಮಾತ್ರವಲ್ಲ, ಆರೆಸ್ಸೆಸ್‌ಗೂ ಮುಖಭಂಗವಾಗಿದೆ. ಅಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು ಇದೀಗ ಸಂಘಪರಿವಾರ ಮುಖಂಡರು ಆತ್ಮಾವಲೋಕನದಲ್ಲಿ ತೊಡಗಿದ್ದಾರೆ.
ಜೈತ್ರ ಯಾತ್ರೆ ಕೈಗೊಂಡಿರುವ ಬಿಜೆಪಿ ಕೇರಳದಲ್ಲೂ ಪ್ರಾಬಲ್ಯವಾಗುವ ಹೊಂಗನಸಿನಲ್ಲಿತ್ತು. ಒಂದು ಸ್ಥಾನದಿಂದ ಎರಡಂಕಿಗಾದರೂ ತಲುಪುವ ವಿಶ್ವಾಸ ಬಿಜೆಪಿ ವರಿಷ್ಠರದ್ದಾಗಿತ್ತು. ಈ ವಿಚಾರದಲ್ಲಿ ಕೇರಳ ಚುನಾವಣಾ ಉಸ್ತುವಾರಿಯಾಗಿದ್ದ ಕರ್ನಾಟಕದ ಡಿಸಿಎಂ ಅಶ್ವತ್ಥನಾರಾಯಣ ವಿಫಲರಾಗಿದ್ದಾರೆ. ಅವರು ಸಮರ್ಥ ರಣತಂತ್ರ ರೂಪಿಸಿದ್ದಲ್ಲಿ ಪಾಲಕ್ಕಾಡ್, ಕಾಸರಗೋಡು, ನೇಮಂ ಕ್ಷೇತ್ರಗಳು ಬಿಜೆಪಿಗೆ ಸಿಗುತ್ತಿದ್ದವು. ನೇಮಂ ಕ್ಷೇತ್ರ ಅದಾಗಲೇ ಬಿಜೆಪಿ ಕೈಯಲ್ಲಿತ್ತು. ಅದೂ ತಪ್ಪಿ ಹೋಗಿದೆ. ದೇಶ ವಿದೇಶಗಳಲ್ಲಿ ಪ್ರಸಿದ್ದಿಯಲ್ಲಿರುವ ಮೆಟ್ರೋ ಮ್ಯಾನ್ ಕೂಡಾ ಗೆಲ್ಲಲು ಸಾಧ್ಯವಾಗಿಲ್ಲ.
ಈ ನಡುವೆ ಆರೆಸ್ಸೆಸ್‌ಗೆ ಸವಾಲಾಗಿದ್ದ ಕೇರಳ ಸಿಎಂ ಪಿನರಾಯ್ ವಿಜಯನ್ ತನ್ನ ಸವಾಲನ್ನು ಗೆದ್ದಿರುವುದರಿಂದ ಸಂಘಕ್ಕೆ ಮುಖಭಂಗವಾಗಿದೆ. ಇದ್ದ ಬಿಜೆಪಿಯ ಒಂದು ಸ್ಥಾನವನ್ನೂ ಕ್ಲೋಸ್ ಮಾಡಿ ಆ ಪಕ್ಷವನ್ನು ನೇಪತ್ಯಕ್ಕೆ ಸರಿಸುವುದಾಗಿ ಪಿನರಾಯ್ ವಿಜಯನ್ ಸವಾಲು ಹಾಕಿದ್ದರು. ಈ ಸವಾಲನ್ನು ವಿಫಲಗೊಳಿಸುವ ಹೆಬ್ಬಯಕೆ ಸಂಘದ್ದಾಗಿತ್ತು. ಆದರೆ ಸಂಘದ ಈ ನಿರೀಕ್ಷೆಯನ್ನು ಸಾಕಾರಗೊಳಿಸುವಲ್ಲಿ ಅಶ್ವತ್ಥನಾರಾಯಣ ಅವರು ಆಸಕ್ತಿ ತೋರಿಲ್ಲ ಎಂಬ ಅಸಮಾಧಾನ ಕಾರಗೋಡಿನ ಸಂಘದ ಹಿರಿಯರದ್ದು.