ಬೆಂಗಳೂರು:ರಾಜ್ಯದಲ್ಲಿ ಕೊರೋನಾ ವೈರಾಣು ಮರಣ ಮೃದಂಗ ಭಾರಿಸುತ್ತಿದ್ದು ಮತ್ತೊಬ್ಬ ಶ್ರೇಷ್ಠ ಚಿತ್ರೋದ್ಯಮಿ ಬಲಿಯಾಗಿದ್ದಾರೆ. ಕನಸಿನ ರಾಣಿ ಖ್ಯಾತಿಯ ನಟಿ ಮಾಲಾಶ್ರೀ ಪತಿ ರಾಮು ಕೋವಿಡ್ 19 ಸೋಂಕಿನಿಂದಾಗಿ ವಿಧಿವಶರಾಗಿದ್ದಾರೆ.
ಕನ್ನಡ ಸಿನಿಲೋಕದ ಖ್ಯಾತ ನಿರ್ಮಾಪಕರಲ್ಲೊಬ್ಬರಾದ ರಾಮು ಅವರು ಕೊರೋನಾ ಸೋಂಕಿಗೊಳಗಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಲಾಕಪ್ ಡೆತ್, ಎಕೆ47, ಕಲಾಸಿಪಾಳ್ಯ ಸಹಿತ ಹಲವು ಹಿಟ್ ಸಿನಿಮಾಗಳ ನಿರ್ಮಿಸಿದ ರಾಮು ನಿಧನದಿಂದಾಗಿ ಕನ್ನಡ ಸಿನಿ ಲೋಕವು ದಿಗ್ಗಜ ಚಿತ್ರೋದ್ಯಮಿಯೊಬ್ಬರನ್ನು ಕಳೆದುಕೊಂಡು ಬಡವಾಗಿದೆ. ರಾಮು ಅವರ ಅಕಾಲಿಕ ನಿಧನಕ್ಕೆ ಚಿತ್ರೋದ್ಯಮದ ಗಣ್ಯರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.