ಬೆಂಗಳೂರು: ಸದ್ದಿಲ್ಲದೆ ಆಗಾಗ್ಗೆ ಸುದ್ದಿಯಾಗುತ್ತಿರುವ ಮೋಹಕ ತಾರೆ ರಮ್ಯಾ ಇದೀಗ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಸಿನಿಮಾ, ರಾಜಕೀಯ ಲೋಕದಿಂದ ದೂರ ದೂರ.. ಆದರೆ ಮದುವೆ ವಿಚಾರದಲ್ಲಿ ನಗುವಿನ ಪ್ರತಿಕ್ರಿಯೆ ರಮ್ಯಾ ಅವರದ್ದು.
ರಮ್ಯಾ ಅವರು ಸಿನಿಮಾರಂಗಕ್ಕೆ ಕಾಲಿಟ್ಟು 18 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ರಮ್ಯಾ ಸಂವಾದ ನಡೆಸಿದರು. ಬಗೆಬಗೆಯ ಪ್ರಶ್ನೆಗಳು ಅವರಿಗೆ ಎದುರಾದವು. ಸಿನಿಮಾ ಲೈಫ್, ರಾಜಕೀಯ ನಡೆ. ಮದುವೆಯ ನಿರ್ಧಾರಗಳಂತಹಾ ವಿಚಾರಗಳಲ್ಲಿ ಹಲವರಿಂದ ಹಲವು ರೀತಿಯ ಕುತೂಹಲಕಾರಿ ಪ್ರಶ್ನೆಗಳು ಎದುರಾದವು.
ರಕ್ಷಿತ್ ಜೊತೆ ಮದುವೆ ಪ್ರಸ್ತಾಪದ ಅಚ್ಚರಿ..
ಹಲವರು ಪ್ರಶ್ನೆಗಳ ನಡುವೆ ‘ನೀವು ಮದುವೆ ಆಗಿದ್ದೀರಾ?’, ‘ಬಾಯ್ ಫ್ರೆಂಡ್ ಇದ್ದಾರ?’ ಎಂಬಿತ್ಯಾದಿ ಪ್ರಶ್ನೆಗಳು ರಮ್ಯಾ ಅವರತ್ತ ಸುಳಿದಾಗ ಎಲ್ಲರಲ್ಲೂ ಉತ್ತರದ ಬಗ್ಗೆ ಕುತೂಹಲ. ಈ ಪ್ರಶ್ನೆಗಳಿಗೆ ‘ಇಲ್ಲ’ ಎಂದು ಉತ್ತರಿಸುತ್ತಿದ್ದ ಮೋಹಕ ತಾರೆಗೆ ಅಭಿಮಾನಿಯೊಬ್ಬ ನಟ ರಕ್ಷಿತ್ ಶೆಟ್ಟಿ ಜೊತೆ ವಿವಾಹದ ಪ್ರಸ್ತಾಪ ಮುಂದಿಟ್ಟು ಅಚ್ಚರಿಗೆ ಕಾರಣವಾದ. ‘ನೀವೇಕೆ ರಕ್ಷಿತ್ ಶೆಟ್ಟಿಯವರನ್ನು ಮದುವೆ ಆಗಬಾರದು’ ಎಂಬ ಪ್ರಶ್ನೆಗೆ ರಕ್ಷಿತ್ ಅವರ ಇನ್‌ಸ್ಟಾ ಖಾತೆ ಟ್ಯಾಗ್ ಮಾಡಿ ರಮ್ಯಾ ನಗುವಿನ ಇಮೋಜಿ ಹಾಕಿದ್ದಾರೆ. ಇದು ಅಭಿಮಾನಿಗಳ ಕುತೂಹಲವನ್ನು ನೂರ್ಮಡಿಗೊಳಿಸಿದೆ.
ಈ ನಡುವೆ ಸಿನಿಮಾ ಲೈಫ್ ಹಾಗೂ ಮುಂದಿನ ರಾಜಕೀಯ ನಡೆ ಕುರಿತ ಪ್ರಶ್ನೆಗಳಿಗೆ ರಮ್ಯಾ ಅವರ ಉತ್ತರಗಳು ಅಚ್ಚರಿಗೆ ಕಾರಣವಾಗಿದೆ. ಈ ಎರಡೂ ಫೀಲ್ಡ್‌ಗಳಿಂದ ಅವರು ದೂರ ಉಳಿದಿದ್ದಾರಂತೆ. ಇವೆರಡೂ ಅವರ ಪಾಲಿಗೆ ಮುಗಿದ ಕಥೆಯಂತೆ.




















































