ದೆಹಲಿ: ದೇಶಾದ್ಯಂತ ಕೊರೋನಾ ಎರಡನೇ ಅಲೆ ತಲ್ಲಣ ಸೃಷ್ಟಿಸುತ್ತಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲಿದ್ದು, ಕೊರೋನಾವನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ. ಈ ನಡುವೆ ದೇಶದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿ ಮಾಡುವ ಸಾಧ್ಯತೆಗಳ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಇನ್ನೊಂದೆಡೆ ಕೆಲವು ನಗರಗಳಲ್ಲಿ ಲಾಕ್‌ಡೌನ್ ಜಾರಿಮಾಡಲು ನ್ಯಾಯಾಲಯಗಳೂ ನಿರ್ದೇಶನ ನೀಡಿರುವ ಬೆಳವಣಿಗೆಗಳೂ ನಡೆದಿವೆ.
ಈ ನಡುವೆ, ಪ್ರಧಾನಿ ಮೋದಿಯವರು ಇಂದು ಕೊರೋನಾ ನಿಯಂತ್ರಣ ಸಂಬಂಧ ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯ ನಂತರ ದೇಶವನ್ನುದ್ದೇಶಿಸಿ ಅವರು ಮಾತನಾಡಿ ಸರ್ಕಾರದ ನಿರ್ಧಾರಗಳನ್ನು ತಿಳಿಸಿದ್ದಾರೆ.
ದೇಶ ಅತೀ ದೊಡ್ಡ ಹೋರಾಟ ನಡೆಸುತ್ತಿದೆ. ಎರಡನೇ ಬಾರಿ ದೇಶ ಭಾರೀ ದೊಡ್ಡ ಸಂಕಷ್ಟಕ್ಕೆ ತುತ್ತಾಗಿದೆ. ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡಿರುವವರ ಕುಟುಂಬದವರ ದಃಖದಲ್ಲಿ ಭಾಗಿಯಾಗಿ ಎಂದು ದೇಶದ ಜನರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲರೂ ಕೈಜೋಡಿಸಬೇಕಿದೆ. ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ದೇಶದ ಜನರಲ್ಲಿ ಧೈರ್ಯ ತುಂಬಿದ್ದಾರೆ.
ಕೊರೋನಾದಿಂದ ನಾವಾಗಿಯೇ ದೂರ ಉಳಿಯಬೇಕು. ಅದಕ್ಕಾಗಿ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು ಎಂದು ಮನವಿ ಮಾಡಿದ ಮೋದಿ, ಲಾಕ್‌ಡೌನ್ ಅಂತಿಮ ನಿರ್ಧಾರವಾಗಬೇಕು. ದೇಶದಲ್ಲಿ ಮತ್ತೊಮ್ಮೆ ಅಂತಹಾ ಲಾಕ್‌ಡೌನ್ ಜಾರಿಗೆ ಅವಕಾಶ ಕೊಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದೇ ವೇಳೆ ಲಾಕ್‌ಡೌನ್ ಕಡೇಯ ಅಸ್ತ್ರವಾಗಲಿ. ಈ ವಿಚಾರದಲ್ಲಿ ಆತುರದ ಕ್ರಮ ಬೇಡ ಎಂದು ಪ್ರಧಾನಿ ಮೋದಿಯವರು ರಾಜ್ಯ ಸರ್ಕಾರಗಳಿಗೆ ಕರೆ ನೀಡಿದ್ದಾರೆ. ಲಾಕ್‌ಡೌನ್ ನಿರ್ಧಾರಕ್ಕೆ ಮುನ್ನ ಮೈಕ್ರೋ ಕಂಟೋನ್ಮೆಂಟ್ ಝೋನ್ ಬಗ್ಗೆ ಗಮನಕೊಡಿ ಎಂದೂ ಅವರು ರಾಜ್ಯಗಳಿಗೆ ಸಲಹೆ ಮಾಡಿದ್ದಾರೆ.