ಬೆಂಗಳೂರು: ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡುವಂತೆ ಸರ್ಕಾರ ಕಟ್ಟಪ್ಪಣೆ ಮಾಡಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಟ್ಟು ಕ್ರಮ ವಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಶೇ.20 ರಷ್ಟು ಹಾಸಿಗೆಗಳನ್ನು ಕೋವಿಡ್ ಗೆ ಮೀಸಲಿಡಲು ಸೂಚಿಸಲಾಗಿದೆ. ಅಗತ್ಯ ಬಂದರೆ ಶೇ.50 ರಷ್ಟು ಮೀಸಲಿಡಬೇಕೆಂದೂ ಸೂಚಿಸಲಾಗಿದೆ. ತೆರೆದ ಪ್ರದೇಶಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಜನರ ಮಿತಿಯನ್ನು 500 ಕ್ಕೆ ಹಾಗೂ ಮುಚ್ಚಿದ ಪ್ರದೇಶಗಳಲ್ಲಿ 200 ಕ್ಕೆ ಸೀಮಿತಗೊಳಿಸಲಾಗಿದೆ. 9 ನೇ ತರಗತಿಗೆ ಶಾಲೆ ನಡೆಸುವುದು ನಿರ್ಬಂಧಿಸಿದ್ದು, 10 ಹಾಗೂ ಪಿಯುಸಿಗೆ ತರಗತಿ ನಡೆಸುವ ಆಯ್ಕೆ ಮಾತ್ರ ನೀಡಲಾಗಿದೆ. ಬೋರ್ಡಿಂಗ್ ಶಾಲೆ, ಹಾಸ್ಟೆಲ್ ಗಳನ್ನು ಬಂದ್ ಮಾಡಲಾಗಿದೆ. ಉನ್ನತ ವ್ಯಾಸಂಗದ ತರಗತಿಗಳನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ ಗಳಲ್ಲಿ ಜಿಮ್, ಈಜುಕೊಳ ಬಳಕೆ ನಿರ್ಬಂಧಿಸಲಾಗಿದೆ. ಜಿಮ್ ಗಳಲ್ಲಿ ಶೇ.50 ರಷ್ಟು ಮಂದಿ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಗುಂಪು ಗೂಡುವುದನ್ನು ತಡೆಯಲು ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಎಂಟು ಜಿಲ್ಲೆಗಳಲ್ಲಿ ಬಾರ್, ಪಬ್ ಗಳಲ್ಲಿ 50% ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.