ದೊಡ್ಡಬಳ್ಳಾಪುರ: ಗ್ರಾಮೀಣ ಭಾಗದ ರೈತರ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.
ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ಬಮುಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಶನಿವಾರ ಡೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 2020-21ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಸರ್ಕಾರಿ ಕೆಲಸಗಳನ್ನು ನಂಬಿಕೊಳ್ಳದೇ ವಿವಿಧ ಕ್ಷೇತ್ರಗಳಲ್ಲಿ ಕೌಶಲ ಬೆಳೆಸಿಕೊಂಡು ಪರ್ಯಾಯ ಉದ್ಯೋಗ ಪಡೆಯುವ ದಿಸೆಯಲ್ಲಿ ಮುನ್ನುಗ್ಗಬೇಕು. ವೈಜ್ಞಾನಿಕ ಕೃಷಿ ಮತ್ತು ಹೈನುಗಾರಿಕೆಯನ್ನು ಪ್ರವೃತ್ತಿಯಾಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಲು ಬಹಳಷ್ಟು ಅವಕಾಶಗಳಿವೆ ಎಂದು ಹೇಳಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ರೈತರ ಮಕ್ಕಳು ಸಹ ಇಂಜಿನಿಯರಿಂಗ್, ಡಾಕ್ಟರ್‌ಗಳಾಗಲು ಅವಕಾಶಗಳಿವೆ. ಸಾಧನೆ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ. ಹಾಗಾಗಿ ವಿದ್ಯಾರ್ಥಿಗಳು ಶ್ರಮ ವಹಿಸಿ ಉನ್ನತ ಸಾಧನೆ ಮಾಡಬೇಕು ಎಂದರು.
ಬಮುಲ್ ಹಾಗೂ ಕೆಎಂಎಫ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ಮಾತನಾಡಿ, ಕರೊನಾ ಹಾಗೂ ಲಾಕ್ ಡೌನ್ ನಿಂದ ಬಮೂಲ್ ಸಂಕಷ್ಟದಲ್ಲಿದ್ದಾಗ ರೈತರು ಬಮೂಲ್ ಗೆ ಶಕ್ತಿ ತುಂಬಿದ್ದದ್ದರು. ಇದೀಗ ಬಮೂಲ್ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದೆ ಅದರಂತೆ ರೈತರಿಂದ ಖರೀದಿಸುವ ಹಾಲಿನ ದರವನ್ನು ಏರಿಕೆ ಮಾಡಲಾಗುತ್ತಿದೆ. ಅಂತೆಯೇ ಇದೀಗ ಏಪ್ರಿಲ್ 1.5 ರೂ ಏರಿಕೆ ಮಾಡಲಾಗಿದೆ. ಹೈನುಗಾರಿಕೆ ನಂಬಿರುವ ರೈತರಿಗೆ ಬಮೂಲ್ ಸದಾ ಬೆನ್ನೆಲುಬಾಗಿ ನಿಂತಿರುತ್ತದೆ ಎಂದರು.
ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಹಲವು ರೈತರಿಗೆ ಶಾಲಾ ಶುಲ್ಕ ಕಟ್ಟಲು ಸಮಸ್ಯೆಯಿದೆ. ಹೈನುಗಾರಿಕೆ ಮತ್ತು ಸಹಕಾರ ಸಂಘಗಳ ಬಟವಾಡೆಯನ್ನೇ ನಂಬಿರುವ ರೈತರಿಗೆ ಪ್ರತಿಭಾ ಪುರಸ್ಕಾರದ ಪ್ರೋತ್ಸಾಹ ಧನ ನೆರವಾಗಲಿದೆ ಎಂದರು. ಐಎಎಸ್ ಮತ್ತು ಕೆಎಎಸ್ ತರಬೇತಿ ಪಡೆಯುವ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಮಕ್ಕಳಿಗೆ ಬಮೂಲ್ ವತಿಯಿಂದ. 50 ಸಾವಿರ, ಐಟಿಐ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು 10 ಸಾವಿರ ನೆರವು ನೀಡಲಾಗುತ್ತಿದೆ. ಆದರೆ ಈ ವಿಭಾಗದಲ್ಲಿ ಅರ್ಜಿಗಳೇ ಸಲ್ಲಿಕೆಯಾಗುತ್ತಿಲ್ಲ. ಹಾಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸೌಲಭ್ಯ ಬಳಸಿಕೊಳ್ಳಬೇಕು ಎಂದರು. ಕರೊನಾ, ಲಾಕ್‌ಡೌನ್‌ನಿಂದಾಗಿ ಬಮೂಲ್ ಸಂಸ್ಥೆ ಸಂಕಷ್ಟದಲ್ಲಿದ್ದರೂ ರೈತರ ಪರವಾಗಿ ನಿಲ್ಲುವ ರೈತರ ಒಕ್ಕೂಟವಾಗಿದೆ. ಬಮೂಲ್ ಸಂಸ್ಥೆ ವತಿಯಿಂದ ಚೀಸ್ ಮತ್ತು 90 ದಿನಗಳು ಬಳಕೆ ಮಾಡುವಂತಹ ತೃಪ್ತಿ ಹಾಲು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಗಿರ್ ಸೇರಿದಂತೆ ವಿವಿಧ ತಳಿಗಳ ಹಸುಗಳನ್ನು ರಾಜ್ಯದ ರೈತರಿಗೆ ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಸ್ವಾಮಿ ಮಾತನಾಡಿ ಬಮೂಲ್ ವತಿಯಿಂದ ಖಾಸಗಿ ಹಾಲು ಸಂಸ್ಥೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಹಾಲನ್ನು ಸ್ಥಗಿತ ಮಾಡಲಾಗಿದೆ. ಇದೀಗ ಬಮೂಲ್ ವತಿಯಿಂದಲೇ ಬೇಡಿಕೆ ಮತ್ತು ಪೂರೈಕೆಯನ್ನು ಹೆಚ್ಚಿಸಲಾಗಿದೆ. ರೈತರ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗದೆ ಉತ್ತಮ ವಿದ್ಯಾಭ್ಯಾಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಸ್ವಾಮಿ, ಶಾಸಕ ವೆಂಕಟರಮಣಯ್ಯ, ತಾಲ್ಲೂಕು ಪಂಚಾಯತ ಅಧ್ಯಕ್ಷ ನಾರಾಯಣಗೌಡ, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ ಲಕ್ಷ್ಮೀನಾರಾಯಣ್,
ಮುಖಂಡರಾದ ಕೃಷ್ಣಮೂರ್ತಿ, ರಾಮಕೃಷ್ಣ, ಡಿಸಿ ಶಶಿಧರ್ ಮತ್ತಿತ್ತರರಿದ್ದರು.