‘ಕಿರಿಕ್ ಪಾರ್ಟಿ’ ಸಿನಿಮಾ ಪ್ರೇರಣೆ; ಫಿಲ್ಮೀ ಸ್ಟೈಲಲ್ಲೇ ಖದೀಮರ ಸೆರೆ.. ಕಿಡ್ನಾಪ್ ಕೇಸ್ ಬೇಧಿಸಿದ ಖಾಕಿ ಟೀಂ..
ಬೆಂಗಳೂರು: ಕೆಲದಿನಗಳಿಂದೀಚೆಗೆ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾ ವಿರುದ್ದದ ಸಮರದಿಂದಾಗಿ ಗಮನಸೆಳೆದಿರುವ ಬೆಂಗಳೂರಿನ ಬಾಣಸವಾಡಿ ಉಪವಿಭಾಗದ ಪೊಲೀಸರು ಇದೀಗ ಮತ್ತೊಂದು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಶಹಬ್ಬಾಸ್‌ಗಿರಿ ಗುಟ್ಟಿಸಿಕೊಂಡಿದ್ದಾರೆ. ಪ್ರತಿಷ್ಟಿತ ಕುಟುಂಬದ ಯುವಕನೊಬ್ಬನ ಅಪಹರಣ ಪ್ರಕರಣವನ್ನು ಬೇಧಿಸಿ ಕೇಡಿಗಳನ್ನು ಜೈಲಿಗಟ್ಟುವ ಮೂಲಕ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಗುರುವಾರ ಮಟಮಟ ಮಧ್ಯಾಹ್ನ ಹೆಚ್.ಆರ್.ಬಿ.ಆರ್ ಬಳಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೊಬ್ಬರ ಮಗನನ್ನು ಕಿಡಿಗೇಡಿಗಳ ತಂಡ ಅಪಹರಿಸಿ ರಹಸ್ಯ ಸ್ಥಳದಲ್ಲಿ ಕೂಡಿಹಾಕಿ ಎರಡು ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿತ್ತು. ಈ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಡ, ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿದ ಬಾಣಸವಾಡಿ ಎಸಿಪಿ ನಿಂಗಪ್ಪ ಬಿ.ಸಕ್ರಿ ನೇತೃತ್ವದ ಪೊಲೀಸರು ಘಟನೆ ನಡೆದ ಆರು ಗಂಟೆಗಳಲ್ಲಿ ಯುವಕನನ್ನು ಪಾರುಮಾಡಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಶಿಕ್ಷಣ ಕ್ಷೇತ್ರ ತಲ್ಲಣ.. ಖಾಕಿ ಪಾಳಯದಲ್ಲೂ ಸಂಚಲನ
ಗುರುವಾರ ಮಧ್ಯಾಹ್ನ 12.35ರ ಸುಮಾರಿಗೆ ರಬೀಜ್ ಅರಾಫತ್ ಎಂಬ ಯುವಕ ಜ್ಯೂಸ್ ಕುಡಿಯಲೆಂದು ಹೆಚ್‌ಆರ್‌ಬಿಆರ್ ಲೇಔಟ್ ಬಳಿ ತನ್ನ ಮನೆ ಸಮೀಪದ ಅಂಗಡಿಗೆ ತೆರಳಿದ್ದ. ಆ ಸಂದರ್ಭದಲ್ಲಿ ನೀಲಿ ಬಣ್ಣದ ಹಳೇ ಮಾರುತಿ 800 ಕಾರಿನಲ್ಲಿ ಬಂದ ನಾಲ್ವರು ಯಾರದೋ ಎಡ್ರೆಸ್ ಕೇಳುವ ನೆಪದಲ್ಲಿ ಯುವಕನನ್ನು ಅಪಹರಿಸಿದ್ದಾರೆ. ಆ ವೇಳೆ ಸ್ಥಳದಲ್ಲಿದ್ದ ನವೀದ್ ಎಂಬವರು ಈ ಯುವಕನ ರಕ್ಷಣೆಗೆ ಧಾವಿಸಿ ಸೆಣಸಾಡಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಮಾಹಿತಿ ಪಡೆದ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಬಾಣಸವಾಡಿ ಎಸಿಪಿ ನಿಂಗಪ್ಪ ಬಿ. ಸಕ್ರಿ ನೇತೃತ್ವದಲ್ಲಿ 4 ವಿಶೇಷ ತಂಡಗಳನ್ನು ರಚಿಸಿ ಪೊಲೀಸರನ್ನು ಅಖಾಡಕ್ಕಿಳಿಸಿದರು. ಅಪಹರಣ ನಡೆದ ಸ್ಥಳ ಮತ್ತು ಸುತ್ತಮುತ್ತಲ ಸಿಸಿಟಿವಿ ಪರಿಶೀಲಿಸಿ ಸಂಪೂರ್ಣ ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿದ ಚಾಣಾಕ್ಷ ಪೊಲೀಸರ ತಂಡವು ಆರೋಪಿಗಳ ಹೆಜ್ಜೆ ಗುರುತು ಬೆನ್ನತ್ತಿತು. ಅದಾಗಲೇ ಅಪಹರಣಕಾರರು ಅಪಹೃತ ಯುವಕನ ಹೆತ್ತವರಿಗೆ ವಾಟ್ಸಪ್ ಮೂಲಕ ಸಂಪರ್ಕಿಸಿ 2 ಕೋಟಿ ರುಪಾಯಿ ಬೇಡಿಕೆ ಇಟ್ಟಿದ್ದರು. ಯುವಕನ ವೀಡಿಯೋ ಕ್ಲಿಪಿಂಗ್ ಕಳುಹಿಸಿ, ಹಣ ನೀಡದಿದ್ದರೆ ಅಂಗಾಂಗ ತುಂಡರಿಸುವ ಬೆದರಿಕೆ ಒಡ್ಡಿದ್ದರು.
ಈ ಅಪಹರಣಕಾರರ ಹೆಜ್ಜೆ ಗುರುತು ಬೆನ್ನತ್ತಿದ ಎಸಿಪಿ ಸಕ್ರಿ ಹಾಗೂ ಕೆ.ಜಿ.ಹಳ್ಳಿ ಸಹಿತ ಬಾಣಸವಾಡಿ ಉಪವಿಭಾಗದ ಠಾಣೆಗಳ ಇನ್‌ಸ್ಪೆಕ್ಟರ್‌ಗಳಾದ ಸಂತೋಷ್ ಕುಮಾರ್, ಸತೀಶ್, ಕಿರಣ್ ಕುಮಾರ್, ಮೆಲ್ವಿನ್ ಫ್ರಾನ್ಸಿಸ್, ವಸಂತ್ ಅವರನ್ನೊಳಗೊಂಡ ಪೊಲೀಸರು ಚಕ್ರವ್ಯೂಹ ನಿರ್ಮಿಸಿ, ಖೆಡ್ಡಾ ತೋಡಿ ಚಾಣಾಕ್ಷತನದಿಂದ ಸರೆಹಿಡಿದರು. ಅಪಹರಣ ನಡೆದು ಆರು ಗಂಟೆಗಳಲ್ಲಿ ಅಪಹರಣಕಾರರನ್ನು ಪತ್ತೆ ಮಾಡಿ ಸೆರೆಹಿಡಿದ ಪೊಲೀಸರು, ಈ ಕೃತ್ಯದ ಹಿಂದಿನ ರೋಚಕ ಕಥೆಯನ್ನು ಅನಾವರಣ ಮಾಡಿದ್ದಾರೆ.
‘ಕಿರಿಕ್ ಪಾರ್ಟಿ’ ಸ್ಟೈಲ್.. olx ಮೂಲಕ ಕಾರು ಖರೀದಿ..
ಪ್ರಮುಖ ಆರೋಪಿ ಅಬ್ದುಲ್ ಫಹಾದ್. ಈತ ನೆಟ್‌ವರ್ಕ್ ಮಾರ್ಕೆಟಿಂಗ್ ವ್ಯವಹಾರದಲ್ಲಿ ಹಿನ್ನಡೆ ಕಂಡಿದ್ದ. ಅದಾಗಲೇ ತನ್ನದೇ ರೀತಿ ಸಂಕಷ್ಟದಲ್ಲಿರುವ ಕಿರಣ್ ಹಾಗೂ ಗೌತಮ್ ಎಂಬವರನ್ನೂ ಸೇರಿಸಿಕೊಂಡು ಶ್ರೀಮಂತರ ಮಕ್ಕಳನ್ನು ಕಿಡ್ನಾಪ್ ಮಾಡಿ ಕೋಟ್ಯಾಂತರ ರೂಪಾಯಿ ವಸೂಲಿಗೆ ಪ್ಲಾನ್ ಮಾಡಿದರು. ಇದಕ್ಕಾಗಿ ‘ಕಿರಿಕ್ ಪಾರ್ಟಿ’ ಸಿನಿಮಾ ಸ್ಟೈಲಲ್ಲಿ olx ಮೂಲಕ ಹಳೆಯ ಮಾರುತಿ 800 ಕಾರು ಖರೀದಿಸಿದರು.
ಇವರು ಈ ಕೃತ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರಿನಲ್ಲಿ 2 ಶಾಲಾ ಕಾಲೇಜು ಹೊಂದಿರುವ ವ್ಯಕ್ತಿಯ ಮಗನನ್ನು. ಮಂಗಳವಾರವೇ ಈ ಯುವಕನ ಅಪಹರಣಕ್ಕೆ ಈ ಖದೀಮರು ವಿಫಲ ಯತ್ನ ಮಾಡಿದ್ದರು. ಅಂದು ಸಾಧ್ಯವಾಗದ ಕೆಲಸವನ್ನು ಗುರುವಾರ ಮಾಡಿ ಇದೀಗ ಜೈಲುಪಾಲಾಗಿದ್ದಾರೆ.
ವ್ಯಾಪಾರದಿಂದ ಉಂಟಾದ ಆರ್ಥಿಕ ಹಿನ್ನಡೆಯಿಂದ ಪಾರಾಗಲು ಶ್ರೀಮಂತರ ಮಕ್ಕಳನ್ನು ಅಪಹರಿಸಿದರೆ ಕೋಟಿಗಟ್ಟಲೆ ದುಡ್ಡು ಸಿಗುತ್ತದೆಂದು ಮನಗಂಡ ಈ ಖದೀಮರು ಸಿನಿಮಾ ಸ್ಟೈಲಲ್ಲಿ ಕಿಡ್ನಾಪ್ ಮಾಡಿದ್ದಾರೆ. ಈ ಕಿರಿಕ್ ಕಿಡ್ನಾಪರ್‌ಗಳನ್ನು ಸೆರೆಹಿಡಿಯಲು ಪೊಲೀಸರು ನಡೆಸಿದ್ದೂ ಫಿಲ್ಮೀ ಸ್ಟೈಲ್ ಕಾರ್ಯಾಚರಣೆ.