ಬೆಂಗಳೂರು: ಸಿಡಿ ಪ್ರಕರಣದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ತಮ್ಮ ಹೆಗಲು ತಾವೇ ಮುಟ್ಟುಕೊಂಡಿರುವ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿರುವ 6 ಸಚಿವರು ತಮ್ಮ ಸ್ಥಾನದ ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್, ಶಾಸಕಿಯರ ಸಮೂಹ ಆಗ್ರಹಿಸಿದೆ.
ಸಚಿವ ಸುಧಾಕರ್ ಅವರ ಹೇಳಿಕೆ ವಿಚಾರವಾಗಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗೂ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯಾರೆಡ್ಡಿ, ಕುಸುಮಾ ಶಿವಳ್ಳಿ ಹಾಗೂ ರೂಪಾ ಶಶಿಧರ್ ಅವರು ನಡೆಸಿದ ಜಂಟಿ ಸುದ್ದಿಗೋಷ್ಠಿ ಗಮನಸೆಳೆಯಿತು.
ಈ ವೇಳೆ ಮಾತನಾಡಿದ ಪುಷ್ಪಾ ಅಮರನಾಥ್, ಸಿಡಿ ಪ್ರಕರಣದಲ್ಲಿ 6 ಸಚಿವರುಗಳು ತಡೆಯಾಜ್ಞೆ ತರುವ ಮೂಲಕ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸೇರಿದಂತೆ ನಮ್ಮ ಪಕ್ಷದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಸಚಿವರು ನೈತಿಕತೆ, ಯೋಗ್ಯತೆ ಕಳೆದುಕೊಂಡಿದ್ದು, ಕೇವಲ ಸಚಿವ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು. ಇವರಿಗೆ ಮತ್ತೆ ಅವಕಾಶವೇ ನೀಡಬಾರದು. ಇವರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸಚಿವ ಸುಧಾಕರ್ ಅವರಿಗೆ ತಮ್ಮ ಹೆತ್ತ ತಾಯಿ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಇವರು ರಾಜೀನಾಮೆ ನೀಡದಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಅವರನ್ನು ವಜಾ ಮಾಡಿ ಮನೆಗೆ ಕಳುಹಿಸಬೇಕು. ಇಂತಹ ಸಚಿವರನ್ನು ಸಂಪುಟದಲ್ಲಿಟ್ಟುಕೊಂಡು ಹೇಗೆ ಕೆಲಸ ಮಾಡುತ್ತಾರೆ? 225 ಶಾಸಕರ ಬಗ್ಗೆ ಪ್ರಶ್ನೆ ಎತ್ತಿದಾಗ ಸ್ಪೀಕರ್ ಅವರೂ ಕೂಡ ಸೇರಿಕೊಳ್ಳುತ್ತಾರೆ. ಅವರ ಘನತೆ ಏನಾಗಬೇಕು? ಸ್ಪೀಕರ್ ಅವರು ಏನು ಮಾಡುತ್ತಿದ್ದಾರೆ? ಅವರಾದರೂ ಈ ಸಚಿವರನ್ನು ಶಾಸಕ ಸ್ಥಾನದಿಂದಲೇ ವಜಾ ಮಾಡಬೇಕು ಎಂದು ಬಿಜೆಪಿ ನಾಯಕರನ್ನೂ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸುಧಾಕರ್ ಅವರ ಹೇಳಿಕೆ ಪಕ್ಷತೀತವಾಗಿ ಇಡೀ ರಾಜಕಾರಣ ಕುಟುಂಬಕ್ಕೆ ದೊಡ್ಡ ಅಪಮಾನ ಮಾಡಿದಂತಿದೆ. ಬಾಯಿ ಬಿಟ್ಟರೆ ರಾಮನ ಜಪ ಮಾಡುವ ಪಕ್ಷದಲ್ಲಿ ಈ ರೀತಿ ಮಾತನಾಡಲು ಅವರಿಗೆ ಅವಕಾಶ ಮಾಡಿಕೊಟ್ಟವರು ಯಾರು? ಬಿಜೆಪಿಯ ನಾಯಕಿಯರಾದ ಶೋಭಾ ಕರಂದ್ಲಾಜೆ ಅವರಾಗಲಿ, ಶಶಿಕಲಾ ಜೊಲ್ಲೆ, ಭಾರತಿ ಶೆಟ್ಟಿ, ತೇಜಸ್ವಿನಿ, ಪೂರ್ಣಿಮಾ ಅವರಾಗಲಿ ಈ ಮಾತನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದರು.
ಸಚಿವರು ಹಿಂದೂ ಸಂಸ್ಕೃತಿಯ ಬಗ್ಗೆ ಅಪಮಾನ ಮಾಡಿದ್ದಾರೆ. ಬಿಜೆಪಿಯವರದ್ದು ಹಿಂದೂ ರಾಷ್ಟ್ರದ ಪರಿಕಲ್ಪನೆ. ಇದೇನಾ ಇಂದೂ ಸಂಸ್ಕೃತಿ ಎಂದು ಶಾಸಕಿಯರು ಪ್ರಶ್ನಿಸಿದರು.
ರೂಪಾ ಶಶಿಧರ್ ಮಾತನಾಡಿ, ಸಚಿವ ಸುಧಾಕರ್ ಅವರು, ಸಭಾಧ್ಯಕ್ಷರು, ಮುಖ್ಯಮಂತ್ರಿಗಳನ್ನೂ ಬಿಡದೇ ಆರೋಪ ಮಾಡಿದ್ದಾರೆ. ಮಾಡಬಾರದ ಕೆಲಸ ಮಾಡಿದವರಿಗೆ ಸಚಿವ ಸ್ಥಾನ ನೀಡಿದ್ದು, ಗೌರವಾನ್ವಿತ ಹುದ್ದೆಯಲ್ಲಿರುವವರಿಗೂ ಅಪಮಾನ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.