ಡ್ರಗ್ಸ್ ಮಾಫಿಯಕ್ಕೂ ಸ್ಯಾಂಡಲ್‌ವುಡ್‌ಗೂ ರಹಸ್ಯ ನಂಟು.. ಎಸಿಪಿ ಸಕ್ರಿ ನೇತೃತ್ವದ ಪೊಲೀಸರ ಖೆಡ್ಡಕ್ಕೆ ಬಿದ್ದ ‘ಕೆಂಪೇಗೌಡ’ ಸಿನಿಮಾ ಖ್ಯಾತಿಯ ನಿರ್ಮಾಪಕ ಅಂದರ್..
ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಾಣಸವಾಡಿ ಉಪವಿಭಾಗದ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸಿಲಿಕಾನ್ ಸಿಟಿಗೆ ಕಂಟಕವೆಂಬಂತಿದ್ದ ಡ್ರಗ್ ಪೆಡ್ಲರ್‌ಗಳ ವಿರುದ್ದ ಸಮರ ಸಾರಿ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿರುವ ಎಸಿಪಿ ಸಕ್ರಿ ನೇತೃತ್ವದ ಪೊಲೀಸ್ ತಂಡ ಇದೀಗ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಶಂಕರ್ ಗೌಡ ಎಂಬವರನ್ನು ಬಂಧಿಸುವ ಮೂಲಕ ಡ್ರಗ್ ಮಾಫಿಯಾದ ಕರಾಳ ಕಥಾನಕದ ರೋಚಕತೆಯನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾವನ್ಬು ಬೇಧಿಸಿರುವ ಈ ಪೊಲೀಸರು 15ಕ್ಕೂ ಹೆಚ್ಚು ಮಂದಿ ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿ 500 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತು ಹಾಗೂ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿನಿಮೀಯ ರೀತಿಯಲ್ಲಿ ನಡೆಸಿದ ಈ ಕಾರ್ಯಾಚರಣೆ ದೇಶದಲ್ಲೇ ಅಪರೂಪ ಎಂಬಂತಿದೆ. ಇಷ್ಟೊಂದು ಪ್ರಮಾಣದಲ್ಲಿ ಡ್ರಗ್ಸ್ ಜಪ್ತಿ ಮಾಡಿರುವುದೂ ದೇಶದ ಇತಿಹಾಸದಲ್ಲೇ ಅಪರೂಪ ಎನ್ನುತ್ತಿದೆ ಖಾಕಿ ಚರಿತ್ರೆ.
ಸಿನಿಮಾ ಶೈಲಿ ಕಾರ್ಯಾಚರಣೆಯಲ್ಲಿ ನಿರ್ಮಾಪಕನ ಬಂಧನ
ಕೆಲ ಸಮಯದಿಂದೀಚೆಗೆ ಬೆಂಗಳೂರಿನಲ್ಲಿ ನಿಗೂಢವಾಗಿ ಬೇರೂರಿದ್ದ ಡ್ರಗ್ ಮಾಫಿಯಾ ಬಗ್ಗೆ ಮಾಹಿತಿ ಕಳೆಹಾಕಲೆಂದೇ ಬಾಸವಾಡಿ ಸಹಾಯಕ ಪೊಲೀಸ್ ಆಯುಕ್ತ ನಿಂಗಪ್ಪ.ಬಿ.ಸಕ್ರಿ ಉಪ ವಿಭಾಗದ ಎಲ್ಲಾ ಠಾಣೆಗಳಲ್ಲಿ ರಹಸ್ಯ ಕಾರ್ಯಾಚರಣಾ ತಂಡ ರಚಿಸಿ ಅಖಾಡಕ್ಕಿಳಿದಿದ್ದರು. ಗೋವಿಂದಪುರ ಠಾಣೆಯ ಇನ್‌ಸ್ಪೆಕ್ಟರ್ ಪ್ರಕಾಶ್, ಬಾಣಸವಾಡಿ ಇನ್‌ಸ್ಪೆಕ್ಟರ್ ಸತೀಶ್, ಹಾಗೂ ರಾಮಮೂರ್ತಿನಗರ, ಕೆಜಿ ಹಳ್ಳಿ ಸುತ್ತಮುತ್ತಲ ಪೊಲೀಸರನ್ನೊಳಗೊಂಡು ಚಕ್ರವ್ಯೂಹ ನಿರ್ಮಿಸಿ ಪೆಡ್ಲರ್‌ಗಳಿಗಾಗಿ ಬೇಟೆ ಕೈಗೊಂಡರು. ಅದಾಗಲೇ ನೈಜೋರಿಯಾ ಹಾಗೂ ಆಫ್ರಿಕಾ ಮೂಲದ 9 ಮಂದಿಯನ್ನು ಸೆರೆಹಿಡಿದು ವಿಚಾರಣೆ ನಡೆಸಿದಾಗ ಮಾದಕ ಪ್ರಪಂಚದ ವಿರಾಟ್ ಜಾಲವೇ ಅನಾವರಣವಾಯಿತು. ಈ ಜಾಲ ಬೆಂಗಳೂರಿನಲ್ಲಿ ಭಾಗಷಃ ದಂಧೆ ನಡೆಸುತ್ತಿತ್ತಾದರೂ ಇಲ್ಲಿಂದ ದೇಶದ ವಿವಿಧ ಭಾಗಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿತ್ತು. ಅದರಲ್ಲೂ ಸ್ಯಾಂಡಲ್‌ವುಡ್ ಗಣ್ಯರನ್ನೂ ಪೆಡ್ಲರ್ ತಂಡಕ್ಕೆ ಸೇರಿಸಿ ತಮ್ಮ ದಂಧೆಗೆ ಸೆಲೆಬ್ರೆಟಿ ಟಚ್ ನೀಡಿದ್ದರು. ಆ ತಂಡವನ್ನು ಸೇರಿದ್ದೇ ತಡ ‘ಕೆಂಪೇಗೌಡ’ ಸಿನಿಮಾ ಖ್ಯಾತಿಯ ಶಂಕರ್ ಗೌಡ ಅವರೂ ಈ ಮಾಫಿಯಾದ ಭಾಗವಾದರು ಎಂದು ವಿದೇಶಿ ಪೆಡ್ಲರ್‌ಗಳು ಎಸಿಪಿ ಸಕ್ರಿ ಮುಂದೆ ಬಾಯಿಬಿಟ್ಟಿದ್ದಾರೆ.
ಈ ಮಾಹಿತಿ ಆಧರಿಸಿ ಕೆಲವು ದಿನಗಳ ಹಿಂದೆ ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಈ ನಿರ್ಮಾಪಕನ ಮನೆ ಮೇಲೆ ದಾಳಿ ನಡೆಸಿದ ಎಸಿಪಿ ಎನ್.ಬಿ.ಸಕ್ರಿ, ಇನ್‌ಸ್ಪೆಕ್ಟರ್ ಪ್ರಕಾಶ್ ಅವರನ್ನೊಳಗೊಂಡ ತಂಡ ಕೆಲವು ದಾಖಲೆಗಳನ್ನು ಸಂಗ್ರಹಿಸಿತ್ತು. ಈ ಮೂಲಕ ಸಮರ್ಪಕ ಸಾಕ್ಷ್ಯ ಕಳೆಹಾಕಿದ ನಂತರ ಇಂದು ನಿರ್ಮಾಪಕ ಶಂಕರ್ ಗೌಡ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಾ-ಕಾಲೇಜು ಪ್ರದೆಶಗಳೇ ಇವರ ಅಡ್ಡೆ..
ರಾಜಧಾನಿ ಬೆಂಗಳೂರಿಗೆ ಡ್ರಗ್ ಜಾಲ ಸವಾಲಾಗಿ ಮಾರ್ಪಟ್ಟಿದ್ದು, ಅದರಲ್ಲೂ ಶಾಲಾ ಕಾಲೇಜು ಸುತ್ತಮುತ್ತ ನಿಗೂಢವಾಗಿ ಕಾರ್ಯಾಚರಿಸುತ್ತಿರುವ ಈ ಮಾಫಿಯಾ ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಯುವಜನ ಸಮೂಹಕ್ಕೆ ಪೂರೈಕೆ ಮಾಡುತ್ತಿತ್ತು. ಈ ಹಿಂದೆ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಚಾಲಾಕಿ ಹಂತಕಪಡೆಯನ್ನು ರಹಸ್ಯ ಕಾರ್ಯಾಚರಣೆ ಮೂಲಕ ಖೆಡ್ಡಾಕ್ಕೆ ಕೆಡವಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದ ಎಸಿಪಿ ನಿಂಗಪ್ಪ ಬಿ.ಸಕ್ರಿ, ಇದೀಗ ಅದೇ ಮಾದರಿಯಲ್ಲಿ ಈ ಡ್ರಗ್ ಮಾಫಿಯಾದ ಕಿರಾತಕರಿಗೂ ಬೇಟೆಯಾಡಿದರು.
ಕಳೆದ ಕೆಲವು ದಿನಗಳಲ್ಲಿ ಹಲವು ಪೆಡ್ಲರ್‌ಗಳನ್ನು ತಂಡೋಪತಂಡವಾಗಿ ಕಂಬಿ ಹಿಂದೆ ಪೆರೇಡ್ ಮಾಡುತ್ತಿದ್ದ ಈ ಪೊಲೀಸರು, ಅದಾಗಲೇ ಬಿಗ್‌ಬಾಸ್ ಸೆಲೆಬ್ರೆಟಿ ಸಹಿತ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಈ ಬಂಧಿತರು ಬಿಚ್ಚಿಟ್ಟ ರಹಸ್ಯವನ್ನಾಧರಿಸಿ ಸಿನಿಮಾ ನಿರ್ಮಾಪಕ ಶಂಕರ ಗೌಡ ಸಹಿತ ಹಲವರನ್ನು ಬಂಧಿಸಿದ್ದಾರೆ. ಇದೀಗ ಈ ಸಂಖ್ಯೆ 15 ದಾಟಿದೆ. ಇನ್ನಷ್ಟು ಮಂದಿ ಪ್ರಭಾವಿಗಳು ಈ ಪೆಡ್ಲರ್‌ಗಳ ಗುಂಪಿನಲ್ಲಿದ್ದು ಅವರಿಗಾಗಿ ಪೊಲೀಸರು ಬೇಟೆ ಮುಂದುವರಿಸಿದ್ದಾರೆ.